Saturday, November 1, 2025

ಕರ್ನೂಲ್‌ ಬಸ್ ದುರಂತ: ​​ಲಗೇಜ್​ ಕ್ಯಾಬಿನ್​​ನಲ್ಲಿ 400 ಮೊಬೈಲ್ ಫೋನ್​ಗಳು ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನೂಲ್‌ನಲ್ಲಿ ಖಾಸಗಿ ಬಸ್‌ಬೆಂಕಿ ದುರಂತಕ್ಕೀಡಾದ ಕುರಿತು ತನಿಖೆ ಆರಂಭವಾಗಿದೆ. ಬಸ್​​ಗೆ ಬೈಕ್​ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದರೂ, ಜ್ವಾಲೆ ಹರಡಲು ಮೊಬೈಲ್ ಫೋನ್​ಳು ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಸ್​​ನ ಲಗೇಜ್ ಕ್ಯಾಬಿನ್‌ನಲ್ಲಿ 400 ಮೊಬೈಲ್ ಫೋನ್‌ಗಳು ಕಂಡುಬಂದಿವೆ. ಅವುಗಳು ಸ್ಫೋಟಗೊಂಡ ಪರಿಣಾಮ ವಾಹನದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಲಗೇಜ್ ಕ್ಯಾಬಿನ್‌ನಲ್ಲಿ ನೂರಾರು ಮೊಬೈಲ್ ಫೋನ್‌ಗಳು ಸ್ಫೋಟಗೊಂಡಿರುವುದನ್ನು ವಿಧಿವಿಜ್ಞಾನ ತಂಡಗಳು ಗುರುತಿಸಿವೆ. ಇದು ಅಪಘಾತದ ತೀವ್ರತೆ ಹೆಚ್ಚಿಸಿ ಭಾರಿ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ, ಪೆಟ್ರೋಲ್ ಸೋರಿಕೆಯಾಗಿದೆ. ಜೊತೆಗೆ ಬೈಕ್​ ಬಸ್ಸಿನ ಅಡಿ ಸಿಲುಕಿಕೊಂಡಿತು. ಬಸ್ ಅದನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಯಿತು. ಘರ್ಷಣೆಯಿಂದ ಬೆಂಕಿ ಹೊತ್ತಿಕೊಡಿದೆ.

ಜೊತೆಗೆ ಬಸ್ಸಿನ ಲಗೇಜ್ ಕ್ಯಾಬಿನ್‌ನಲ್ಲಿ 400 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳಿದ್ದು, ಹೆಚ್ಚಿನ ಶಾಖದಿಂದಾಗಿ ಅವುಗಳ ಎಲ್ಲ ಬ್ಯಾಟರಿಗಳು ಸ್ಫೋಟಗೊಂಡಿವೆ. ಇದರಿಂದ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಲಗೇಜ್ ಕ್ಯಾಬಿನ್‌ನ ಮೇಲಿರುವ ಪ್ರಯಾಣಿಕರ ವಿಭಾಗಕ್ಕೆ ಹರಡಿತು. ಪರಿಣಾಮವಾಗಿ, ಲಗೇಜ್ ಕ್ಯಾಬಿನ್‌ನ ಮೇಲಿರುವ ಸೀಟುಗಳಲ್ಲಿದ್ದ ಜನರು ತಪ್ಪಿಸಿಕೊಳ್ಳಲು ಸಮಯ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ.

ಅದಕ್ಕಾಗಿಯೇ ಬಸ್‌ನ ಮುಂಭಾಗದಲ್ಲಿರುವ ಸೀಟುಗಳು ಮತ್ತು ಬರ್ತ್‌ಗಳಲ್ಲಿದ್ದ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಧಿವಿಜ್ಞಾನ ತಂಡಗಳು ತಿಳಿಸಿವೆ.

ತನಿಖಾಧಿಕಾರಿಗಳ ಪ್ರಕಾರ, ಲಗೇಜ್ ಕ್ಯಾಬಿನ್‌ನಲ್ಲಿದ್ದ ಮೊಬೈಲ್​​ಗಳ ಎಲ್ಲಾ ಬ್ಯಾಟರಿಗಳು ಒಮ್ಮೆಲೇ ಸ್ಫೋಟಗೊಂಡಾಗ ದೊಡ್ಡ ಸದ್ದು ಕೇಳಿಬಂದಿದೆ. ಚಾಲಕ ಬಸ್ ನಿಲ್ಲಿಸಿ ಹಿಂಭಾಗಕ್ಕೆ ಬಂದು ಪರಿಶೀಲಿಸಿದ್ದಾನೆ. ಬೆಂಕಿ ಹೊತ್ತಿಕೊಂಡಿದ್ದು ಕಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಸ್ ಅದಾಗಲೇ ದಟ್ಟ ಹೊಗೆ ಮತ್ತು ಜ್ವಾಲೆಯಿಂದ ಆವೃತವಾಗಿತ್ತು. ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಬಲಭಾಗದಲ್ಲಿರುವ ತುರ್ತು ಬಾಗಿಲು ತೆರೆಯದ ಕಾರಣ ಅವರ ಪ್ರಯತ್ನಗಳು ವ್ಯರ್ಥವಾಗಿವೆ ಎಂದು ಅಂದಾಜಿಸಲಾಗಿದೆ.

ದುರಂತಕ್ಕೀಡಾದ ಬಸ್‌ ನಿಯಮ ಉಲ್ಲಂಘಿಸಿ ಸರಕುಗಳನ್ನು ಸಾಗಿಸಿದೆ. ಈ ಕುರಿತು ಖಾಸಗಿ ಬಸ್​ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಯಾಣಿಕರ ವಾಹನಗಳಲ್ಲಿ ಅವರ ವೈಯಕ್ತಿಕ ಸಾಮಗ್ರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರಕುಗಳನ್ನು ಸಾಗಿಸಬಾರದು ಎಂಬುದು ನಿಯಮ. ಆದರೆ, 400 ಕ್ಕೂ ಅಧಿಕ ಮೊಬೈಲ್​ ಫೋನ್​ಗಳನ್ನು ಬಸ್​ನಲ್ಲಿ ಸಾಗಿಸಲಾಗಿದೆ. ಅವುಗಳ ಸ್ಫೋಟದಿಂದ ಬೆಂಕಿ ರಭಸವಾಗಿ ಹೊತ್ತಿಕೊಂಡಿದೆ ಎಂದು ತನಿಖಾ ತಂಡ ತಿಳಿಸಿದೆ.

error: Content is protected !!