ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ಎರಡೂವರೆ ವರ್ಷದ ಹೊಸ್ತಿಲಿನಲ್ಲಿ ಸಂಪುಟ ಪುನಾರಚನೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಹೊಸ ಚೈತನ್ಯ ಸೃಷ್ಟಿಸಿವೆ. ಬಿಹಾರ ಚುನಾವಣಾ ಫಲಿತಾಂಶದ ನಂತರ ಪುನಾರಚನೆ ಖಚಿತ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸುಳಿವು ನೀಡಿದ್ದು, ಈ ಹೇಳಿಕೆ ರಾಜಕೀಯ ಪೈಪೋಟಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ವೇಗ ಪಡೆಯುತ್ತಿರುವ ಸಮಯದಲ್ಲಿ, ಸಿಎಂ ಸಿದ್ದರಾಮಯ್ಯ ಪುನಾರಚನೆ ಅಸ್ತ್ರ ಎತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ಈಗಾಗಲೇ ಪುನಾರಚನೆ ಕುರಿತು ಸೂಚನೆ ನೀಡಿತ್ತು. ನಾನು ಎರಡೂವರೆ ವರ್ಷಗಳ ಬಳಿಕ ಮಾಡುವೆ ಎಂದಿದ್ದೆ. ಬಿಹಾರ ಫಲಿತಾಂಶ ಬಂದ ನಂತರ ಸಂಪುಟ ಪುನಾರಚನೆ ಖಚಿತ” ಎಂದು ಹೇಳಿದ್ದಾರೆ. ಹೀಗಾಗಿ, ವರ್ಷಾಂತ್ಯದೊಳಗೆ ಸಂಪುಟ ಬದಲಾವಣೆ ನಡೆಯುವುದು ನಿಶ್ಚಿತ ಎಂಬ ರಾಜಕೀಯ ವಲಯದ ಅಭಿಪ್ರಾಯ ವ್ಯಕ್ತವಾಗಿದೆ.
ಈ ನಡುವೆ ಕೆಲವು ಹಿರಿಯ ಸಚಿವರು ತ್ಯಾಗಕ್ಕೆ ಸಿದ್ಧತೆ ಆರಂಭಿಸಿರುವುದು ಗಮನಾರ್ಹ. ಮೂಲಗಳ ಪ್ರಕಾರ, ಪುನಾರಚನೆಯಾಗಿದ್ದರೆ ಕನಿಷ್ಠ 12 ಮಂದಿ ಸೀನಿಯರ್ ನಾಯಕರಿಗೆ ‘ಗೇಟ್ ಪಾಸ್’ ಸಿಗುವ ಸಾಧ್ಯತೆ ಇದೆ. ಕೃಷ್ಣಬೈರೇಗೌಡ ಕೂಡಾ “ಪುನಾರಚನೆ ಖಚಿತ, ಹೈಕಮಾಂಡ್ ಸೂಚಿಸಿದರೆ ತ್ಯಾಗಕ್ಕೂ ಸಿದ್ಧ” ಎಂದು ಹೇಳಿ ಈ ಚರ್ಚೆಗೆ ಬಲ ತುಂಬಿದ್ದಾರೆ.
ಇದೀಗ ಪವರ್ ಶೇರ್ ರಾಜಕೀಯದ ಕಸರತ್ತು ಗರಿಷ್ಠ ಹಂತ ತಲುಪಿದ್ದು, ಡಿಕೆ ಶಿವಕುಮಾರ್ ಶಾಂತವಾಗಿ ಹೈಕಮಾಂಡ್ ನಿರ್ಧಾರ ಕಾದು ನೋಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪುನಾರಚನೆ ಮೂಲಕ ಪವರ್ ಶೇರ್ ತಂತ್ರಕ್ಕೆ ಬ್ರೇಕ್ ಹಾಕುವ ಯತ್ನದಲ್ಲಿದ್ದು, ಬಿಹಾರ ಫಲಿತಾಂಶದ ನಂತರ ದೆಹಲಿಯಲ್ಲಿ ನಡೆಯಲಿರುವ ಸಿದ್ದರಾಮಯ್ಯ-ಹೈಕಮಾಂಡ್ ಭೇಟನೆ ನಿರ್ಣಾಯಕವಾಗಲಿದೆ.

