ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ದೇಶಾದ್ಯಂತ ಮಕ್ಕಳಿಗೆ ಕೊರೋನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗಲಿದೆ. ರಾಜ್ಯದಲ್ಲಿ ಅಂದಾಜು 45 ಲಕ್ಷ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಕೋವಿನ್ ಆಪ್ ಮೂಲಕ ಲಸಿಕೆಗಾಗಿ ನೋಂದಣಿ ಮಾಡಬೇಕಿದ್ದು, ಈಗಾಗಲೇ ಲಕ್ಷಾಂತರ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಬಿಬಿಎಂಪಿ ಬೆಂಗಳೂರಿನಲ್ಲಿ ಏಳು ಲಕ್ಷ ಮಕ್ಕಳನ್ನು ಗುರುತಿಸಿದ್ದು, ಲಸಿಕೆ ನೀಡಲಾಗುತ್ತಿದೆ.
ಶಾಲೆ ಕಾಲೇಜುಗಳಲ್ಲೇ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ೨೫ ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸಂಗ್ರಹವಿದೆ. ನಾಳೆ ಮತ್ತೆ 10-12 ಲಕ್ಷ ಡೋಸ್ ಲಸಿಕೆ ಬರುವ ನಿರೀಕ್ಷೆ ಇದೆ.
ಕಾಲೇಜುಗಳಲ್ಲಿ ಲಸಿಕೆ ನೀಡಿದಂತೆ ಈ ಬಾರಿ ಶಾಲೆಗಳಲ್ಲಿ ಲಸಿಕೆ ನೀಡಲು ಸಿದ್ಧತೆಯಾಗಿದೆ. ಲಸಿಕೆ ಪಡೆದ ಮಕ್ಕಳು ತರಗತಿ ಬಳಿಯೇ ಅರ್ಧ ಗಂಟೆ ವಿಶ್ರಾಂತಿ ಪಡೆದು ನಂತರ ತೆರಳಬೇಕಿದೆ.
ವ್ಯಾಕ್ಸಿನ್ ಪಡೆಯಲು ಮಕ್ಕಳಿಗೆ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಒಂದು ಪಕ್ಷ ಆಧಾರ್ ಇಲ್ಲದಿದ್ದರೆ ಶಾಲೆಯ ಐಡಿ ಕಾರ್ಡ್ ಬಳಸಿಯೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.