Tuesday, October 28, 2025

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳದಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬೆನಕಲ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಮಕ್ಕಳಾದ ರಮೇಶ್​(4), ಜಾನು(2) ಮತ್ತು ತಾಯಿ ಲಕ್ಷ್ಮವ್ವ ಮೃತರು. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಸ್ಥಳಕ್ಕೆ ಕೊಪ್ಪಳ ಎಸ್​ಪಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ್ದು, ಬೆಣಕಲ್ ಗ್ರಾಮದಲ್ಲಿ 30 ವರ್ಷದ ಲಕ್ಷ್ಮವ್ವ ಬಜಂತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ಮಕ್ಕಳಿಗೆ ನೇಣು ಹಾಕಿದ್ದಾಳೆ. ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದುವರೆಗೂ ಯಾರು ದೂರು ಕೊಟ್ಟಿಲ್ಲ ಎಂದರು.

ಲಕ್ಷ್ಮವ್ವ 2016ರಲ್ಲಿ ವಿವಾಹವಾಗಿದ್ದರು. ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಒಂದೇ ಕೊಠಡಿಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

error: Content is protected !!