ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಖಾಸಗಿ ಸಂಘಟನೆಗಳು ಸರ್ಕಾರಿ ಸ್ಥಳ ಬಳಕೆಗೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ನಿಯಮಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಖಾಸಗಿ ಸಂಘಟನೆಯೊಂದು ಸರ್ಕಾರದ ನಿರ್ಬಂಧವನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸರ್ಕಾರದ ನಿಯಮಕ್ಕೆ ತಡೆ ನೀಡಿದ್ದಾರೆ. ವಿಚಾರಣೆಯನ್ನು ನವೆಂಬರ್ 2 ನೇ ವಾರಕ್ಕೆ ಮುಂದೂಡಿದ್ದಾರೆ.
“19(1)(A) ಮತ್ತು (B) ವಿಧಿಯ ಅಡಿಯಲ್ಲಿ ಸಂವಿಧಾನವು ನೀಡಿರುವ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ. ಖಾಸಗಿ ಸಂಘಟನೆಗಳನ್ನು ನಿರ್ಬಂಧಿಸುವುದು ಸಂವಿಧಾನದ 32 ನೇ ವಿಧಿ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಬೇಕು ಎಂದು ಅಡ್ವಕೇಟ್ ಜನರಲ್‌ಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠಕ್ಕೆ ಸಂಸ್ಥೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಭಳ್ಳಿ ಕಮಿಷನರ್ಗೆ ನೋಟಿಸ್ ನೀಡಿದೆ.
ಆರ್‌ಎಸ್‌ಎಸ್ ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆ : ಹೈಕೋರ್ಟ್ ಮಧ್ಯಂತರ ಆದೇಶ

