ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗುಮೊಗದ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ 4 ವರ್ಷವಾಗಿದೆ. ನಾಲ್ಕು ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹೊರಗೆ ಬಿದ್ದಾಗಲೇ ಜನರೆಲ್ಲ ಗಾಬರಿಯಾಗಿದ್ದರು. ಸಣ್ಣ ಪುಟ್ಟ ಸಮಸ್ಯೆ ಅಷ್ಟೇ ಇದ್ದು ಪುನೀತ್ ಆರೋಗ್ಯವಾಗಿ ವಾಪಾಸಾಗಲಿ ಎಂದುಕೊಂಡಿದ್ದರು. ಆದರೆ ಪುನೀತ್ ನಿಧನದ ಸುದ್ದಿ ಬರಸಿಡಿಲಿನಂತೆ ಅಬ್ಬರಿಸಿತ್ತು.
ಅಂದಿನಿಂದ ಇಂದಿನವರೆಗೂ ಪುನೀತ್ ಹೆಸರಿನಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಲೇ ಇವೆ. ಒಳ್ಳೆ ಕೆಲಸಗಳ ಮೂಲಕ ಪುನೀತ್‌ರನ್ನು ಜನ ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಾರೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುನೀತ್ ಸಮಾಧಿಗೆ ಬಣ್ಣ ಬಣ್ಣದ ಗುಲಾಬಿ ಹೂವಿನ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬ ಬೆಳಗ್ಗೆ 11 ಗಂಟೆಗೆ ಪುನೀತ್ ಸಮಾಧಿಗೆ ಪೂಜೆ ನೆರವೇರಿಸಲಿದ್ದು, ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡಲಿದ್ದಾರೆ.
ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲಗಳಿಂದ ಅಭಿಮಾನಿಗಳು ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅವರ ಅಭಿಮಾನಿಗಳು ತಾವಿರುವ ಸ್ಥಳದಿಂದಲೇ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
ಪವರ್ ಸ್ಟಾರ್ ಅಪ್ಪು ಅಗಲಿ ನಾಲ್ಕು ವರ್ಷ, ಅಭಿಮಾನಿಗಳ ಮನಸ್ಸಲ್ಲಿ ಪುನೀತ್ ಶಾಶ್ವತ

