March 19, 2026
Thursday, March 19, 2026
spot_img

ಜವಳಿ ನೀತಿಗಾಗಿ ತಮಿಳುನಾಡು, ಮಧ್ಯಪ್ರದೇಶ ಮಾದರಿ ಅಧ್ಯಯನ: ಸಚಿವ ಶಿವಾನಂದ ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜವಳಿ ನೀತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು ಎಂದರು.

ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ.

ಮಹಾರಾಷ್ಟ್ರ ಸರ್ಕಾರ ವಿದ್ಯುತ್‌ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ ಎಂದು ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !