ಹೊಸದಿಗಂತ ವರದಿ, ಅಂಕೋಲಾ:
ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಜಿಲ್ಲೆಯ ಎಲ್ಲಾ ಶಾಸಕರ, ಸಂಸದರ ಹಾಗೂ ಅಧಿಕಾರ ಸಹಕಾರದೊಂದಿಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆಗೊಂಡು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಸಚಿವ ಶಿವರಾಮ ಹೆಬ್ಬಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಯನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿ ಎಲ್ಲರ ಸಹಕಾರದೊಂದಿಗೆ ಜಿಲ್ಲೆಯ ಪ್ರತಿ ತಾಲೂಕುಗಳ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ವೈದ್ಯರನ್ನು, ವೈದ್ಯಕೀಯ ಪರಿಕರಗಳನ್ನು ಸಮರ್ಥ ಸಮಯದಲ್ಲಿ ಒದಗಿಸುವುದರ ಜೊತೆಯಲ್ಲಿ ಆಕ್ಸಿಜನ್ ತಯಾರಿಕಾ ಘಟಕವನ್ನು ಸ್ಥಾಪಿಸುವುದರ ಮೂಲಕವಾಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಚೈತನ್ಯವನ್ನು ತುಂಬುವ ಕಾರ್ಯವನ್ನು ಮಾಡಲಾಗಿದೆ ಎಂದ ಅವರು
ಪ್ರವಾಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಪ್ರಮಾಣ ವಚನ ಪಡೆದ ಮರುದಿನವೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲೆಯ ಹಾನಿಗೊಂಡ ಪ್ರದೇಶಗಳ ವೀಕ್ಷಣೆಗೆ ಕರೆತಂದು ಸೂಕ್ತ ಪರಿಹಾರ ದೊರಕಿಸಿ ಕೊಡುವಲ್ಲಿ ಯಶಸ್ಸು ಸಾಧಿಸಿದ್ದೇನೆ ಎಂದು ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭವಿಷ್ಯದ ಹಿತ ದೃಷ್ಟಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಮಾನ ನಿಲ್ದಾಣ, ವಾಣಿಜ್ಯ ಬಂದರು ಹಾಗೂ ಹಲವಾರು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಉಂಟಾಗಿದ್ದ ಅಡೆತಡೆಗಳನ್ನು ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದು , ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ
ಆತ್ಮತೃಪ್ತಿ ಇದೆ ಎಂದು ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮರು ವಿಂಗಡನೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆ ಹಾವೇರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಿಸಿದ್ದು ಮುಖ್ಯಮಂತ್ರಿಗಳು ತಮ್ಮ ಮೇಲಿಟ್ಟಿರುವ ಭರವಸೆಗೆ ಚ್ಯುತಿಬಾರದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಂಡರೂ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನೂತನ ಉಸ್ತುವಾರಿ ಸಚಿವರ ಜೊತೆಗೂಡಿ ಅಭಿವೃದ್ಧಿ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸುವುದಾಗಿ ಹೇಳಿದ ಅವರು ನೂತನ ಉಸ್ತುವಾರಿ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉತ್ತರಕನ್ನಡ ಜಿಲ್ಲೆಯ ಜನರು ಪ್ರೀತಿ ವಿಶ್ವಾಸಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.