ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಉದ್ಯಮಗಳು ಸ್ಥಳಾಂತರವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಹಲವು ಕಂಪನಿಗಳನ್ನು ಕರ್ನಾಟಕಕ್ಕೆ ಕರೆತರಲು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. “ನಾನು 10 ಲಕ್ಷ ಕೋಟಿ ಬಂಡವಾಳವನ್ನು ರಾಜ್ಯಕ್ಕೆ ತಂದಿದ್ದೇನೆ. ಆದರೆ, ಕೆಲ ಪ್ರಮುಖ ಉದ್ಯಮಗಳು ಕೇಂದ್ರದ ರಾಜಕೀಯ ಹಸ್ತಕ್ಷೇಪದಿಂದ ಬೇರೆ ರಾಜ್ಯಗಳಿಗೆ ಹೋಗಿವೆ,” ಎಂದು ಪಾಟೀಲ್ ಹೇಳಿದರು.
ಸೆಮಿ-ಕಂಡಕ್ಟರ್ ಸೇರಿದಂತೆ ಹಲವು ಹೈಟೆಕ್ ಉದ್ಯಮಗಳು ಕೈ ತಪ್ಪಲು ಬೇರೆ ಬೇರೆ ಕಾರಣಗಳಿದ್ದರೂ, ಕೇಂದ್ರ ಸರ್ಕಾರವು ತಮಗೆ ಬೇಕಾದ ರಾಜ್ಯಗಳಿಗೆ ಕಂಪನಿಗಳನ್ನು ಕಳುಹಿಸುತ್ತಿದೆ ಎಂದು ಸಚಿವರು ಟೀಕಿಸಿದರು. “ನಾವು ಕಂಪನಿಗಳೊಂದಿಗೆ ಎಲ್ಲಾ ಮಾತುಕತೆಗಳನ್ನು ಪೂರ್ಣಗೊಳಿಸಿದ್ದರೂ, ದೆಹಲಿಗೆ ಹೋದ ನಂತರ ನಿರ್ಧಾರ ಬದಲಾಗುತ್ತದೆ. ಗೂಗಲ್ ಕಂಪನಿ ಆಂಧ್ರಪ್ರದೇಶಕ್ಕೆ ತೆರಳಲು ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ಅದು ಚಂದ್ರಬಾಬು ನಾಯ್ಡು ಅವರಿಗೆ ನೀಡಿದ ಉಡುಗೊರೆ,” ಎಂದು ಅವರು ವಾಗ್ದಾಳಿ ನಡೆಸಿದರು.
ಈ ವೇಳೆ ಅವರು ಮೈಸೂರಿನಲ್ಲಿ ಬೋಯಿಂಗ್ ಸಹಭಾಗಿತ್ವದ ರಂಗಸನ್ಸ್ ಏರೋಸ್ಪೇಸ್ ಕಂಪನಿಯ ನೂತನ ಘಟಕವನ್ನು ಉದ್ಘಾಟಿಸಿದರು.
ಸಚಿವರು ಮಾತನಾಡುತ್ತಾ, “ಒಂದು ಕಾಲದಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದ ರಂಗಸನ್ಸ್ ಪರಿವಾರವು ಇಂದು ಏರೋಸ್ಪೇಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವುದು ಹೆಮ್ಮೆಯ ಸಂಗತಿ. ಈ ನೂತನ ಘಟಕವು ಜಾಗತಿಕ ಮಟ್ಟದ ವಿಸ್ತಾರ, ವಿನ್ಯಾಸ ಮತ್ತು ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ. ವೈಮಾಂತರಿಕ್ಷ ಕ್ಷೇತ್ರದಲ್ಲಿ ಅವರಿಗೆ ಕೈಗಾರಿಕಾ ಇಲಾಖೆ ಅಗತ್ಯ ಸಹಕಾರ ನೀಡಲಿದೆ,” ಎಂದು ಹೇಳಿದರು.
ಪಾಟೀಲ್ ಅವರು ಬೋಯಿಂಗ್ ಮತ್ತು ರಂಗಸನ್ಸ್ ಏರೋಸ್ಪೇಸ್ ನಡುವಿನ ಸಹಭಾಗಿತ್ವವನ್ನು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯದ ಹೊಸ ಅಧ್ಯಾಯ ಎಂದು ಬಣ್ಣಿಸಿದರು. “ನಮ್ಮ ರಾಜ್ಯದ ಏರೋಸ್ಪೇಸ್ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವ ಮಟ್ಟಕ್ಕೆ ಬಂದಿವೆ. ಇದು ಕರ್ನಾಟಕದ ಕೈಗಾರಿಕಾ ಶಕ್ತಿಗೆ ದೊಡ್ಡ ಸಾಕ್ಷ್ಯ,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

