ಗ್ರಾಮೀಣರ ಬದುಕಿಗೆ ನರೇಗಾ ಯೋಜನೆ ಉಪಯುಕ್ತ: ಸುಜಾ ಕುಶಾಲಪ್ಪ

ಹೊಸ ದಿಗಂತ ವರದಿ, ಮಡಿಕೇರಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಕಡುಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪಂಚಾಯತ್, ವೀರಾಜಪೇಟೆ ತಾಲೂಕು ಪಂಚಾಯತ್, ಕೆ.ಬಾಡಗ ಗ್ರಾಮ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೀರಾಜಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿಯ ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ನಡೆದ 16 ನೇ ವರ್ಷದ ನರೇಗಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ತರ ಯೋಜನೆಯಾಗಿದೆ. ಮುಖ್ಯವಾಗಿ ವಲಸೆ ತಡೆಗಟ್ಟಿ ಇರುವಲ್ಲಿಯೇ ಕೆಲಸ ನೀಡುವ ಯೋಜನೆ ಇದಾಗಿದ್ದು, ವೈಯಕ್ತಿಕ ಕಾಮಗಾರಿ ಅಡಿ ಜೀವಿತಾವಧಿಯಲ್ಲಿ ರೂ.2.5 ಲಕ್ಷದವರೆಗೆ ಉಚಿತ ಕಾಮಗಾರಿ ಪಡೆಯಬಹುದು ಎಂದರು.
ದೇಶದ 200 ಹಿಂದುಳಿದ ಜಿಲ್ಲೆಗಳಲ್ಲಿ 2002 ಫೆ. 2ರಂದು ಪ್ರಥಮವಾಗಿ ನರೇಗಾ ಯೋಜನೆ ಜಾರಿಗೊಳಿಸಲಾಯಿತು. ಈ ದಿನವನ್ನು ನರೇಗಾ ದಿನವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ನರೇಗಾ ನೌಕರರ ಸಂಘದ ಸದಸ್ಯರು ಗ್ರಾಮ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ರೀತಿಯ ಉದ್ಯಾನವಗಳು ನಿರ್ಮಾಣವಾಗಿವೆ ಎಂದು ಪ್ರಶಂಸಿಸಿದ ಅವರು, ಪ್ರತಿಯೊಬ್ಬರೂ ಕೂಡಾ ಗ್ರಾಮೀಣ ಭಾಗದಲ್ಲಿ ಜಾಬ್ ಕಾರ್ಡ್‌ಗಳನ್ನು ಹೊಂದಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಅವರು ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಕೆ.ಬಾಡಗ ಚಿಕ್ಕ ಗ್ರಾಮ ಪಂಚಾಯಿತಿ ಆಗಿದ್ದರೂ ಸಹ ತಾಲೂಕಿನಲ್ಲಿಯೇ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದೆ. ಜೊತೆಗೆ ಪರಿಶಿಷ್ಟ ಪಂಗಡದವರ ಭಾಗವಹಿಸುವಿಕೆಯಲ್ಲಿಯೂ ಮುಂದಿದೆ. ಈ ನಿಟ್ಟಿನಲ್ಲಿ ಕೆ.ಬಾಡಗ ಪಂಚಾಯಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕರ್ನಾಟಕ ರಾಜ್ಯ ನರೇಗಾ ನೌಕರರ ಸಂಘ ಸ್ಥಾಪನೆಯಾಗಿರುವುದು ಉತ್ತಮ ವಿಚಾರವಾಗಿದೆ. ಜಿಲ್ಲಾ ಪಂಚಾಯತ್ ಮತ್ತು ಎಲ್ಲಾ ಅಧಿಕಾರಿ ವೃಂದ ಸಂಘವು ಕೈಗೊಳ್ಳುವ ಒಳ್ಳೆಯ ಕೆಲಸಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಮನರೇಗಾ ಯೋಜನೆಗೆ ಅಗತ್ಯವಿರುವ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಈ ಬಾರಿ ಅವಧಿಗೂ ಮುನ್ನವೇ ಜಿಲ್ಲೆಗೆ ನೀಡಲಾಗಿದ್ದ 7 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಸಾಧಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವೀರಾಜಪೇಟೆ ತಾ.ಪಂ.ಇಒ ಅಪ್ಪಣ್ಣ ಅವರು ನರೇಗಾ ದಿನಾಚರಣೆಯ ವಿಶೇಷತೆಗಳ ಬಗ್ಗೆ ತಿಳಿಸಿದರು. ಮಡಿಕೇರಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರು ನರೇಗಾ ಯೋಜನೆಯನ್ನು ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಮತ್ತು ಸೋಮವಾರಪೇಟೆ ತಾಲೂಕು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರವೀಶ್ ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್ ನರೇಗಾ ಯೋಜನೆಯ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲಾ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮನರೇಗಾ ಯೋಜನೆಯ ಅನುಷ್ಠಾನದಲ್ಲಿ ಮುಖ್ಯ ಪಾತ್ರವಹಿಸುವ ಜೊತೆಗೆ ನರೇಗಾ ನೌಕರರಿಗೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಅವರು ಇ-ಶ್ರಮ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷೆ ರೀಟಾ ವಿಜಯ, ಸದಸ್ಯರಾದ ರಾಧಾ, ರಿತೇಶ್ ಬಿದ್ದಪ್ಪ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್, ಹೇಮಂತ್ ಮತ್ತು ಪಿಡಿಒ ಪೂಣಚ್ಚ, ಮತ್ತಿತರರು ಇದ್ದರು.
ನರೇಗಾ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಆರೋಗ್ಯ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಆಂದೋಲನ, ನರೇಗಾ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 100 ದಿನ ಪೂರೈಸಿದ ನರೇಗಾ ಕಾರ್ಮಿಕ ಮಹಿಳೆ ಶಾಲಿನಿ ಅವರನ್ನು ಅಭಿನಂದಿಸಲಾಯಿತು. ನರೇಗಾ ನೌಕರರ ಸಂಘದ ವತಿಯಿಂದ ಗ್ರಾಮದ ಶಾಲಾ ಆವರಣದಲ್ಲಿ ಸ್ಚಚ್ಛತಾ ಶ್ರಮದಾನ ಜರುಗಿತು.
ಗ್ರಾಮ ಕಾಯಕ ಮಿತ್ರರಾದ ಉಷಾ ಅವರಿಗೆ ಆಯುಕ್ತಾಲಯದಿಂದ ನೀಡಲಾಗಿದ್ದ ಸೀರೆಯನ್ನು ಉಪ ಕಾರ್ಯದರ್ಶಿ ಲಕ್ಷ್ಮಿ ವಿತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!