January21, 2026
Wednesday, January 21, 2026
spot_img

ಯೂರೋಪಿನ ಮೊದಲ ಹಿಂದು ಶಿಲಾ ದೇವಾಲಯಕ್ಕೆ ಮೂರನೇ ಕಿಂಗ್ ಚಾರ್ಲ್ಸ್, ರಾಣಿ ಕ್ಯಾಮಿಲ್ಲಾ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

30 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಯೂರೋಪಿನ ಮೊದಲ ಹಿಂದು ಶಿಲಾ ದೇವಾಲಯವಾದ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರವನ್ನು ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.

1995ರಲ್ಲಿ ಉದ್ಘಾಟನೆಯಾದ ಯುರೋಪಿನ ಮೊದಲ ಸಾಂಪ್ರದಾಯಿಕ ಹಿಂದು ಶಿಲಾ ದೇವಾಲಯ ಇದಾಗಿದ್ದು, ಇದರ 30ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಕಿಂಗ್ ದಂಪತಿ ಪಾಲ್ಗೊಂಡರು.

ದೇವಾಲಯಕ್ಕೆ ಆಗಮಿಸಿದ ಕಿಂಗ್ ಚಾರ್ಲ್ಸ್ ದಂಪತಿಯನ್ನು ಸಾಂಪ್ರದಾಯಿಕವಾಗಿ ಹಿಂದು ಸಂಸ್ಕೃತಿಯಂತೆ ಸ್ವಾಗತಿಸಲಾಯಿತು. ಮುಖ್ಯ ಅರ್ಚಕ ಸಾಧು ಯೋಗವಿವೇಕದಾಸ್ ಸ್ವಾಮಿ ನಾಡಚಾಡಿ ಅವರು ಶಾಂತಿ ಮತ್ತು ಸ್ನೇಹವನ್ನು ಸಂಕೇತಿಸುವ ಪವಿತ್ರ ದಾರ ಕಟ್ಟುವ ಮೂಲಕ ಕಿಂಗ್ ದಂಪತಿಯನ್ನು ಸ್ವಾಗತಿಸಿದರು. 76 ವರ್ಷದ ಕಿಂಗ್ ಚಾರ್ಲ್ಸ್ ದಂಪತಿ ದೇವಾಲಯದ ಮುಖ್ಯ ಸಂಕೀರ್ಣವನ್ನು ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಗಳನ್ನು ತೆಗೆದು ಧಾರ್ಮಿಕ ಮೌಲ್ಯಗಳಿಗೆ ಒತ್ತು ನೀಡಿದರು.

ಕಿಂಗ್ ಚಾರ್ಲ್ಸ್ ಅವರು 1996, 2007 ಮತ್ತು 2009ರಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅರ್ಚಕರು, ಅವರ ನಿರಂತರ ಸ್ನೇಹ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಭಾರತದಿಂದ ವಿಡಿಯೊ ಸಂದೇಶ ಕಳುಹಿಸಿದ ಮಹಾಂತ ಸ್ವಾಮಿ ಮಹಾರಾಜ್, ಕಿಂಗ್ ಚಾರ್ಲ್ಸ್ ದಂಪತಿಯ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

Must Read