ಹೊಸದಿಗಂತ ವರದಿ, ತುಮಕೂರು :
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ದಕ್ಷಿಣ ಭಾರತದಲ್ಲಿಯೇ ಏಕೈಕ ಸನ್ಯಾಸಿ ಮಠವೆಂದೆ ಪ್ರಖ್ಯಾತಿ ಪಡೆದಿರುವ ತಿಪಟೂರು ತಾಲೂಕಿನ
ಕೆರೆಗೋಡಿ-ರಂಗಾಪುರ ಸುಕ್ಷೇತ್ರಕ್ಕೆ ಉತ್ತರಾಧಿಕಾರಿಯಾಗಿ ಷಣ್ಮುಖಸ್ವಾಮಿ ಅವರನ್ನು ಭಾನುವಾರ ಮಠದ ಸಂಪ್ರದಾಯದಂತೆ ಗುರುಪರದೇಶೀಕೇಂದ್ರ ಸ್ವಾಮೀಜಿಯವರು ಸ್ವೀಕರಿಸಿದ್ದಾರೆ.
ತಾಲ್ಲೂಕಿನ ರಂಗಾಪುರ ಗ್ರಾಮದ ಮಠದ ಮನೆಯ ಪರಂಪರೆಯಲ್ಲಿ ಎಂಟನೆಯ ಸ್ವಾಮೀಜಿಗಳಾಗಿ ಉತ್ತರಾಧಿಕಾರವನ್ನು ಷಣ್ಮುಖಸ್ವಾಮಿ ಸ್ವೀಕರಿಸಿದ್ದಾರೆ. ಪೂರ್ವಾಶ್ರಮದಲ್ಲಿ ಉತ್ತರಾಧಿಕಾರಿಯಾಗಿ ಸ್ವೀಕರಿಸುವ ಕಾರ್ಯವೂ ಮಠದ ಭಕ್ತರ, ಸಾರ್ವಜನಿಕರ ಸಮ್ಮುಖದಲ್ಲಿ ನೆರವೇರಿತು. ನಂತರದಲ್ಲಿ ಕೆರೆಗೋಡಿಯ ಶಂಕರೇಶ್ವರ ಸ್ವಾಮಿಯವರಿಗೆ ಪೂಜಾ ಕೈಂಕರ್ಯವನ್ನು ಸಲ್ಲಿಸಿದ ನಂತರದಲ್ಲಿ ರಂಗಾಪುರದ ಮಠಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ ಮಠದ ಪರಂಪರೆಯಂತೆಯೇ ಉತ್ತರಾಧಿಕಾರಿ ಸ್ವೀಕಾರವು ನಡೆದಿದೆ. ಸಮಾಜದ ಏಳಿಗೆಗಾಗಿ ಮಠವೂ ಕಾರ್ಯನಿರ್ವಹಿಸುತ್ತಾ ಭಕ್ತರ ಹಿತವನ್ನು ಕಾಪಾಡಿಕೊಂಡು ಅಭಿವೃದ್ಧಿ ಹೊಂದುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಷಣ್ಮುಖಸ್ವಾಮಿಯವರಿಂದಲೂ ಮಠದ ಅಭಿವೃದ್ಧಿಯಾಗಲಿದ್ದು ಭಕ್ತರ ಸಹಕಾರ ಅಗತ್ಯವಾಗಿದೆ. ಅಲ್ಲದೇ ಉತ್ತರಾಧಿಕಾರಿಯೂ ಎಲ್ಲಾ ಬಗೆಯ ಕೌಟುಂಬಿಕ ಸಂಬಂಧದಿಂದ ದೂರ ಉಳಿದು ಎಲ್ಲರನ್ನು ಸಮಾನರನ್ನಾಗಿ ಕಾಣುತ್ತಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.