ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಲ್ಲಿ: ದಿಲ್ಲಿಯಲ್ಲಿ ಐವರು ಸಚಿವರನ್ನು ಭೇಟಿಯಾಗುತ್ತೇನೆ ಮತ್ತು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಸಂಸದರ ಸಭೆಯನ್ನು ಮಾಡುತ್ತಿದ್ದೇನೆ ಎಂದು ದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಜೆಟ್‌ಗೆ ಸಂಬಂಧವಿದೆ. ಸಂಸದರ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಪಟ್ಟಿರುವ ಹಲವಾರು ಯೋಜನೆ-ಕಾರ್ಯಕ್ರಮಗಳ ಬಗ್ಗೆ ಚರ್ಚೆಯಾಗುತ್ತದೆ. ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುತ್ತೇನೆ. ಜೊತೆಗೆ ಪವರ್ ಮಿನಿಸ್ಟರ್ ಅವರ ಭೇಟಿಯಾಗುವ ಉದ್ದೇಶವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಜೆ ಭೇಟಿಯಾಗುವ ಉದ್ದೇಶವಿದೆ. ನಾಳೆಯೂ ದಿಲ್ಲಿಯಲ್ಲಿಯೇ ಇರುತ್ತೇನೆ, ಇನ್ನಿಬ್ಬರು ಸಚಿವರನ್ನು ಭೇಟಿಯಾಗಲಿದ್ದೇನೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಸಾರ್ವಜನಿಕ ಮಾತಿಲ್ಲ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಪ್ರಯತ್ನಿಸಲಾಗುತ್ತಿದೆ. ಅವಕಾಶ ಸಿಕ್ಕರೆ ಭೇಟಿಯಾಗುತ್ತೇನೆ. ಸಂಪುಟ ಪುನಾರಚನೆ ಮತ್ತು ಸಂಪುಟ ವಿಸ್ತರಣೆಯ ಬಗ್ಗೆ ಸಾರ್ವಜನಿಕವಾಗಿ ಮಾತಾಡುವುದಿಲ್ಲ. ಊಹಾಪೋಹಗಳಿಗೂ ನಾನು ಉತ್ತರಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.