ಟೆಂಪಲ್ ಟೂರಿಸಂಗೆ ಆದ್ಯತೆ ನೀಡಿ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕರ್ನಾಟಕದ ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ದೇವಸ್ಥಾನ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸ್ಮಾರಕ ಪ್ರವಾಸೋದ್ಯಮಕ್ಕೂ ಅವಕಾಶವಿರುವುದರಿಂದ ಇದಕ್ಕೆ ಉತ್ತೇಜನ ನೀಡಲು ಎರಡನ್ನೂ ಸಂಯೋಜಿಸಿ ಟೂರಿಸಂ ಸರ್ಕ್ಯೂಟ್ ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ ಹಾಗೂ ದೈವ ಸಂಕಲ್ಪ ಯೋಜನೆಗಳನ್ನು (Integrated Temple Management System- ಐಟಿಎಂಎಸ್) ಲೋಕಾರ್ಪಣೆ ಮಾಡಿ, ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುವಂತೆ ತಿಳಿಸಿದರು.

ಐಟಿಎಂಎಸ್ ನ್ನು ಜಾರಿಗೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ದೇವಸ್ಥಾನಗಳ ನಿರ್ವಹಣೆ ಬಹಳ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವಾಗಬೇಕು. ದೇವಸ್ಥಾನಗಳ ಆಸ್ತಿಗಳ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಅಗತ್ಯವಿದೆ. ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡಿ , ಪೂರ್ಣಪ್ರಮಾಣದಲ್ಲಿ ಸ್ಥಳೀಯವಾಗಿ ವ್ಯವಸ್ಥೆ ಮಾಡಿ ಆಡಳಿತ ಸುಧಾರಿಸುವ ಅಗತ್ಯವಿದೆ. ಸಾರ್ವಜನಿಕರ ದೇಣಿಗೆ ಹಾಗೂ ಆಸ್ತಿ ಒಳಗೊಂಡಿರುವುದರಿಂದ ನಿರ್ವಹಣೆಯ ಜೊತೆಗೆ ನಿಯಂತ್ರಣವೂ ಅಗತ್ಯ ಎಂದರು.
ದೇವಸ್ಥಾನಗಳ ಸ್ವಚ್ಛತೆಗೆ ಆದ್ಯತೆ:
ದೇವಸ್ಥಾನಗಳ ಅರ್ಚಕರು ಹಾಗೂ ಪೂಜಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಿಎಂ, ದೇವಸ್ಥಾನಗಳ ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಬೇಕು. ದೇವಸ್ಥಾನಗಳ ಆವರಣಗಳ ವಾತಾವರಣ ಕಲುಷಿತಗೊಳ್ಳದಂತೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್.ಎ.ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!