ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿಯುವ ಸಂಕಲ್ಪ ಮಾಡಿ: ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕರೆ

ಹೊಸ ದಿಗಂತ ವರದಿ, ಮಡಿಕೇರಿ:

ಈಗಾಗಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲೂ ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿಯುವ ಸಂಕಲ್ಪವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ವತಿಯಿಂದ ಮೂರು ದಿನಗಳ ಕಾಲ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊಡಗು, ಹೇಳಿಕೇಳಿ ಬಿಜೆಪಿಯ ಭದ್ರಕೋಟೆಯಾಗಿದ್ದು, ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಇದು ಮುಂದುವರಿಯಬೇಕು ಎಂದು ನುಡಿದರು.
ತಾಲಿಬಾನ್ ಮನಸ್ಥಿತಿಯ ಉಪ ನಾಯಕರು: ಕರ್ನಾಟಕದಲ್ಲಿ ಕಾಂಗ್ರೆಸ್’ನಲ್ಲಿ ಹಲವು ಬಣಗಳಾಗಿದ್ದು, ಅವುಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳು ಮಾತ್ರ ಸಕ್ರಿಯವಾಗಿವೆ. ಇಬ್ಬರು ನಾಯಕರು ಕೂಡಾ ತಾಲಿಬಾನ್ ಮನಸ್ಥಿತಿಯವರನ್ನೇ ತಮ್ಮ ಉಪ ನಾಯಕರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ವ್ಯಂಗವಾಡಿದರು.
ಶಿಕ್ಷಣದಲ್ಲಿ ಸಾಮರಸ್ಯ ತರುವ ಹಾಗೂ ಪ್ರತ್ಯೇಕತೆಯನ್ನು ತೊಡೆದು ಹಾಕುವ ಉದ್ದೇಶದಿಂದ ಭಾರತ ಮಾತ್ರವಲ್ಲದೆ ಹಲವು ರಾಷ್ಟ್ರಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದೀಗ ನಾವೇ ಬೇರೆ ಎನ್ನುವ ಮಾನಸಿಕತೆಯನ್ನು ಬಿತ್ತುವ ಕೆಲಸ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, 1947ರಲ್ಲೂ ಇದೇ ಮಾನಸಿಕತೆ ದೇಶವನ್ನು ಇಬ್ಭಾಗ ಮಾಡಿತ್ತು ಎಂದು ಪ್ರತಾಪ್ ಸಹ ನೆನಪಿಸಿದರು.
ಟರ್ಕಿಯಲ್ಲಿ ಖಲೀಫನನ್ನು ಮತ್ತೆ ಅಧಿಕಾರಕ್ಕೇರಿಸುವ ಸಂಬಂಧ ನಡೆದ ಖಿಲಾಫತ್ ಚಳುವಳಿಗೆ ಭಾರತದಲ್ಲೂ ಬೆಂಬಲ ವ್ಯಕ್ತವಾಗಿತ್ತು ಎಂಬುದನ್ನು ಸ್ಮರಿಸಿದ ಅವರು, ಎಲ್ಲಕ್ಕಿಂತ‌ ದೇಶ ಮೊದಲು ಎಂಬ ಭಾವನೆ ನಮ್ಮಲ್ಲಿ ಮೂಡದ ಹೊರತು ಪ್ರತ್ಯೇಕತೆಯ ಮನಸ್ಥಿತಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲೂ ಕೇರಳ ಮಾದರಿಯ ಹತ್ಯೆಗಳು ನಡೆಯುತ್ತಿದ್ದು, ಕೊಡಗಿನಲ್ಲೂ ಕುಟ್ಟಪ್ಪ, ಪ್ರವೀಣ್ ಪೂಜಾರಿ ಹತ್ಯೆ ನಡೆದಿದೆ. ನೆರೆಯ ದಕ್ಷಿಣ ಕನ್ನಡ, ಬೆಂಗಳೂರು ಮಾತ್ರವಲ್ಲದೆ, ಇದೀಗ ಶಿವಮೊಗ್ಗದಲ್ಲೂ ಕೇರಳ ಮಾದರಿಯ ಹತ್ಯೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಉನ್ನತ ಸ್ಥಿತಿಯತ್ತ ದಾಪುಗಾಲಿಡುತ್ತಿದ್ದು, ಜಗತ್ತಿನ ಇತರ ರಾಷ್ಟ್ರಗಳೂ ಭಾರತವನ್ನು ಗೌರವದಿಂದ ಕಾಣುವ ಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲೂ ಬಿಜೆಪಿ ಸರಕಾರವಿದ್ದು,ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯವ ಕೆಲಸ ಮಾಡುತ್ತಿದೆ. ಪ್ರಸಕ್ತ ಬಿಜೆಪಿ ಕಾರ್ಯಕರ್ತರ ಹೊಣೆಗಾರಿಕೆ ಹೆಚ್ಚಿದ್ದು, ಹಿಂದೆ ವಿರೋಧ ಪಕ್ಷದಲ್ಲಿದ್ದ ನಾವು ಸರಕಾರದ ವೈಫಲ್ಯವನ್ನು ಮನೆಮನೆಗೆ ತಿಳಿಸುವ ಕೆಲಸ ಮಾಡುತ್ತಿದ್ದರೆ, ಇದೀಗ ನಮದೇ ಸರಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಸೇವೆಯೇ ಸಂಘಟನೆ ಎಂದು ಮೋದಿಯವರು ಹೇಳಿದ್ದು, ಅದರಂತೆ ಸೇವೆಯ ಮೂಲಕವೇ ಸಂಘಟನೆಯನ್ನು ಬಲಪಡಿಸಬೇಕೆಂದು ಅವರು ಸಲಹೆ ಮಾಡಿದರು.
ಕೊರೋನಾ ಸಂದರ್ಭದಲ್ಲೂ 130ಕೋಟಿ ಜನಸಂಖ್ಯೆ ಇರುವ ಭಾರತ ಆರ್ಥಿಕವಾಗಿ ಸಮತೋಲನ ಕಾಯ್ದುಕೊಂಡಿರುವುದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ ಎಂದು ಪ್ರಶಂಸಿಸಿದ ಅಪ್ಪಚ್ಚುರಂಜನ್, ಕೊರೋನಾವನ್ನು ನಿಯಂತ್ರಿಸುವಲ್ಲೂ ಭಾರತ ಮುಂಚೂಣಿಯಲ್ಲಿದ್ದು, ಈ ಸಂಕಷ್ಟ ಪರಿಸ್ಥಿತಿಯಲ್ಲೂ ಪಕ್ಷದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದು, ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ವಿಪಕ್ಷವಾಗಿರುವ ಕಾಂಗ್ರೆಸ್ ಹೋರಾಟ ನಡೆಸುವ ನೈತಿಕತೆಯನ್ನೂ ಕಳೆದುಕೊಂಡಿದ್ದು, ಸರಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಚರ್ಚಿಸುವ ಬದಲು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಸದನದಲ್ಲಿ ಧರಣಿ ನಡೆಸುವ ಮೂಲಕ ನಗೆಪಾಟಿಲಿಗೆ ಈಡಾಗಿದೆ ಎಂದು ಲೇವಡಿ ಮಾಡಿದರು.
ಕೊಡಗು ಜಿಲ್ಲೆಯ ಎಲ್ಲಾ ಸ್ತರದ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮುಕ್ತ ಕೊಡಗು ಆಗಿದ್ದು, ಇದು ಹೀಗೆಯೇ ಮುಂದುವರಿಯಬೇಕೆಂದು ಅಪ್ಪಚ್ಚುರಂಜನ್ ಆಶಿಸಿದರು.
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಮಂಗಳೂರು ವಿಭಾಗದ ಪ್ರಭಾರಿ ಹಾಗೂ ಕೊಡಗು ಉಸ್ತುವಾರಿ ವಿಜಯಕುಮಾರ್ ಶೆಟ್ಟಿ, ಪ್ರಶಿಕ್ಷಣ ವರ್ಗದ ಉಸ್ತುವಾರಿ ಮಂಜುಳಾ, ವಿಧಾನ‌ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಹಾಜರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಅಧ್ಯಕ್ಷತೆ ವಹಿಸಿದ್ದರೆ, ಪ್ರಧಾನ ಕಾರ್ಯದರ್ಶಿಗಳಾದ ರವಿ ಕಾಳಪ್ಪ ಸ್ವಾಗತಿಸಿ, ಅರುಣ್ ಭೀಮಯ್ಯ ಕಾರ್ಯಕ್ರಮ‌ ನಿರೂಪಿಸಿ, ಹೆಚ್.ಕೆ.ಮಾದಪ್ಪ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!