ಹೊಸ ದಿಗಂತ ವರದಿ, ಮಡಿಕೇರಿ:
ಬೇಸಿಗೆ ಕಾಲ ಹತ್ತಿರ ಬರುತ್ತಿದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನ ಹರಿಸುವಂತೆ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತೀ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಒಂಟಿಯಂಗಡಿ, ಹಚ್ಚಿನಾಡು ಭಾಗದಲ್ಲಿ ತ್ವರಿತವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಸಲಹೆ ಮಾಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪ್ರತೀ ಗ್ರಾಮಕ್ಕೂ ಕುಡಿಯುವ ನೀರು ಒದಗಿಸಬೇಕು. ಜೊತೆಗೆ ಜಲಜೀವನ್ ಮಿಷನ್ ಯೋಜನೆಯನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.
ಹಟ್ಟಿಹೊಳೆ, ಬೇತ್ರಿ ಮತ್ತಿತರ ಕಡೆ ಸ್ವಾಭಾವಿಕವಾಗಿ ದೊರೆಯುವ ಜಲ ಸಂಪನ್ಮೂಲ ಬಳಸಿಕೊಳುವಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ವಸತಿ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ಇದುವರೆಗೆ ವಸತಿ ಯೋಜನೆ ತಲುಪದಿರುವ ಕುಟುಂಬಗಳಿಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಮನೆ ಇಲ್ಲದವರಿಗೆ ವಸತಿ ಯೋಜನೆ ಕಲ್ಪಿಸಲು ಮುಂದಾಗುವಂತೆ ಇಒಗಳಿಗೆ ಅಪ್ಪಚ್ಚುರಂಜನ್ ನಿರ್ದೇಶನ ನೀಡಿದರು.
ಹೆಚ್ಚಿನ ಜನರು ವಾಸ ಮಾಡುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ಅಪ್ಪಚ್ಚುರಂಜನ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು, ಅಮ್ಮತ್ತಿಯಲ್ಲಿ ಸ್ಮಶಾನ ಭೂಮಿ ನಿರ್ಮಾಣಕ್ಕೆ ಗಮನಹರಿಸುವಂತೆ ಸಲಹೆ ಮಾಡಿದರು.
ಕಳಪೆ ಕಾಮಗಾರಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳಪೆ ಕಾಮಗಾರಿ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ತ್ವರಿತವಾಗಿ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ನಾಕೂರು-ಶಿರಂಗಾಲದಲ್ಲಿ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದು, ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಸ್ವಚ್ಛ ಭಾರತ ಅಭಿಯಾನದಡಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. ಪರಿಸರ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಭಾರತ ಅಭಿಯಾನಕ್ಕೆ ಸರ್ಕಾರ ಹೆಚ್ಚಿನ ಹಣ ಒದಗಿಸುತ್ತಿದ್ದು, ಆ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸುವಂತೆ ಸಂಸದರು ಸೂಚಿಸಿದರು.
ಶ್ರೀರಂಗಪಟ್ಟಣದಿಂದ ಗುಡ್ಡೆ ಹೊಸೂರುವರೆಗೆ ಸುಮಾರು 82 ಕಿ.ಮೀ. ಹೆದ್ದಾರಿಯಲ್ಲಿ ವಿದ್ಯುತ್ ಮಾರ್ಗ ಸಂಬಂಧಿಸಿದಂತೆ ಅಗತ್ಯ ಕ್ರಮವಹಿಸುವಂತೆ ಸೆಸ್ಕ್ ಇಇಗೆ ಸಂಸದರು ಸೂಚಿಸಿದರು.
ವಿದ್ಯುತ್ ಸಮಸ್ಯೆ: ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಅವರು, ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಆದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕಿದೆ ಎಂದು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು, ಟಿ.ಶೆಟ್ಟಿಗೇರಿಯಲ್ಲಿ ವಿದ್ಯುತ್ ಘಟಕ ನಿರ್ಮಾಣಕ್ಕೆ ಕಳೆದ ಆರು ತಿಂಗಳಿನಿಂದ ಅಲ್ಲಿನ ಸಾರ್ವಜನಿಕರು ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಕೆಲಸ ಆಗಿಲ್ಲ ಎಂದು ಹೇಳಿದರು.
ಲಕ್ಷ್ಮಣ ತೀರ್ಥ ಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಯಮುನಾ ಚಂಗಪ್ಪ ಅವರು ಕೋರಿದರು. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್’ಗೆ ಸೂಚಿಸಲಾಗುವುದು ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.