ಬಸ್ನಲ್ಲಿ ತಾಯಿ ಮಗ ಇಬ್ಬರೂ ಪ್ರಯಾಣಿಸುತ್ತಿದ್ದರು. ತಾಯಿ ಕಾದಂಬರಿಯೊಂದನ್ನು ಓದುತ್ತಿದ್ದರೆ, ಮಗ ಮಕ್ಕಳ ಕಥೆಗಳು ಪುಸ್ತಕ ಓದುತ್ತಿದ್ದ. ಪಕ್ಕದ ಸೀಟಿನಲ್ಲಿಯೂ ತಾಯಿ ಮತ್ತು ಮಗಳಿದ್ದರು. ತಾಯಿ ಮೊಬೈಲ್ನಲ್ಲಿ ಹಾಡು ಕೇಳುತ್ತಿದ್ದರೆ, ಮಗಳು ಮೊಬೈಲ್ನಲ್ಲಿ ಗೇಮ್ಸ್ ಆಡುತ್ತಿದ್ದಳು.
ಇದನ್ನೆಲ್ಲ ಎದುರು ಸೀಟಿನಲ್ಲಿ ಇದ್ದ ಅಜ್ಜ ಗಮನಿಸುತ್ತಿದ್ದರು. ಪುಸ್ತಕ ಹಿಡಿದಿದ್ದ ಮಹಿಳೆಯ ಬಳಿ ಬಂದು, ಈಗಿನ ಕಾಲದವರಿಗೆ ಮೊಬೈಲ್ ಕೊಡಲಿಲ್ಲ ಎಂದರೆ ಸಿಟ್ಟು ಬರುತ್ತದೆ. ಸಣ್ಣ ವಯಸ್ಸಿಗೇ ಮೊಬೈಲ್ ಬಳಸುವುದನ್ನು ಕಲಿತಿರುತ್ತಾರೆ. ಈಗಿನ ಕಾಲದಲ್ಲಿ ಪುಸ್ತಕ ಓದೋರನ್ನು ನೋಡೋದು ತುಂಬಾ ಕಡಿಮೆ. ನಿನ್ನ ಮಗನಿಗೆ ಪುಸ್ತಕದ ರುಚಿ ಹತ್ತಿಸಿದ್ದು ಹೇಗೆ ಎಂದು ಕೇಳಿದರು.
ಅದಕ್ಕೆ ತಾಯಿ ಹೇಳಿದಳು, ಮಕ್ಕಳು ನಮ್ಮ ಮಾತನ್ನ ಕೇಳುವುದಿಲ್ಲ, ಆದರೆ ನಮ್ಮನ್ನು ಅನುಸರಿಸುತ್ತಾರೆ ಎಂದು!
ನಮ್ಮ ಮಕ್ಕಳು ನಮ್ಮದ್ದೇ ಪ್ರತಿರೂಪ, ನಾವು ನಡೆದ ಹಾದಿಯನ್ನೇ ಅವರು ಆರಿಸುತ್ತಾರೆ. ನಮ್ಮನ್ನು ನೋಡಿ ಕಲಿಯುತ್ತಾರೆ. ಹೇಳಿ ಕಲಿಸುವ ಪದ್ಧತಿ ಈಗಿಲ್ಲ. ನಾವು ನಡೆದುಕೊಳ್ಳುವ ರೀತಿ ಮೇಲೆ ಎಲ್ಲವೂ ನಿರ್ಧರಿತವಾಗಿದೆ.