ಉಕ್ರೇನ್ ಕುರಿತು ಭಾರತ ಸರ್ಕಾರ ನೀಡಿದ್ದ ಸೂಚನೆಗಳನ್ನೆಲ್ಲ ನಿರ್ಲಕ್ಷಿಸಿ ಈಗ ದೇಶವನ್ನು ಬಯ್ದುಕೊಳ್ಳುವುದು ಸಾಧುವೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ಯುದ್ಧಗ್ರಸ್ತವಾಗುತ್ತಿದ್ದಂತೆ ಸಹಜವಾಗಿಯೇ ಅಲ್ಲಿರುವ ಭಾರತೀಯರು ಸಹಾಯದ ಮೊರೆ ಹೋಗುತ್ತಿರುವುದರ ವರದಿಗಳು ಹೆಚ್ಚಾಗಿ ಬರುತ್ತಿವೆ. ಸುಮಾರು 20,000 ಭಾರತೀಯರಿರುವ ಉಕ್ರೇನಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾಲು ಹೆಚ್ಚಿನದು ಎನ್ನಲಾಗಿದೆ.

ಇವರಲ್ಲಿ ಕೆಲವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟು, ಭಾರತ ಸರ್ಕಾರ ತಮಗೆ ಸಹಾಯವನ್ನೇ ಮಾಡುತ್ತಿಲ್ಲ ಎಂದು ಕೂಗಾಡುತ್ತಿರುವುದೂ ಕಣ್ಣೆದುರಿಗಿದೆ. ಭಾರತ ದೂಷಣೆಯ ಯಾವೊಂದು ಅವಕಾಶವನ್ನೂ ಬಿಟ್ಟುಕೊಡದ ರಾಹುಲ್ ಗಾಂಧಿಯಂಥವರು ಇಂಥ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಸರ್ಕಾರವನ್ನು ಗೇಲಿ ಮಾಡುವುದಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಇಷ್ಟಕ್ಕೂ ವಾಸ್ತವವೇನು?

ವಾಸ್ತವ ಏನೆಂದರೆ, ಪರಿಸ್ಥಿತಿ ಉಲ್ಬಣಗೊಳ್ಳುವ ಎರಡು ವಾರಗಳ ಮೊದಲಿಂದಲೇ ಭಾರತ ಸರ್ಕಾರ ಅಲ್ಲಿಂದ ವಾಪಸಾಗಲಿಚ್ಛಿಸುವವರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿತ್ತು. ಅಷ್ಟೇ ಅಲ್ಲ, ಫೆಬ್ರವರಿ 15ರಂದು ವಿದೇಶ ಸಚಿವಾಲಯವು ಬಹಳ ಸ್ಪಷ್ಟ ಮಾತುಗಳಲ್ಲಿ “ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳೆಲ್ಲ ತಕ್ಷಣ ಭಾರತಕ್ಕೆ ವಾಪಸಾಗಬೇಕು” ಅಂತ ಸಲಹಾತ್ಮಕ ಸೂಚನೆಯೊಂದನ್ನು ಬಿಡುಗಡೆ ಮಾಡಿತ್ತು. ಇಂಥ ಎಲ್ಲ ಉಪಕ್ರಮಗಳನ್ನು ನಿರ್ಲಕ್ಷಿಸಿದವರು ಈಗ ಭಾರತ ಸರ್ಕಾರ ತಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ಅಲವತ್ತುಕೊಂಡರೆ ಅದು ನ್ಯಾಯವೇ?

ಇಷ್ಟಾಗಿಯೂ ಭಾರತವೇನೂ ಈಗ ಕೈಚೆಲ್ಲಿ ನಿಂತಿಲ್ಲ. ಉಕ್ರೇನ್ ಒಳಗೆ ವಿಮಾನ ತೆಗೆದುಕೊಂಡುಹೋಗಿ ಎಲ್ಲರನ್ನು ಕರೆತರುವ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಯುದ್ಧಗ್ರಸ್ತವಾಗಿರುವ ದೇಶದೊಳಗೆ ವಿಮಾನ ಸಂಚಾರವೇ ಸ್ಥಗಿತವಾಗಿದ್ದರೆ ಭಾರತವೇನು ಮಾಡಲು ಸಾಧ್ಯ? ಇನ್ನು, ಪ್ರಧಾನಿ ಮೋದಿಯವರು ರಷ್ಯದ ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಿರುವ ದೂರವಾಣಿ ಸಂಭಾಷಣೆಯಲ್ಲೂ ಉಕ್ರೇನಿನಲ್ಲಿರುವ ಭಾರತೀಯರ ಕ್ಷೇಮ ಪ್ರಸ್ತಾಪವಾಗಿದೆ.

ಒಂದು ತಿಂಗಳಿಂದ ಉಕ್ರೇನ್ ಮೇಲೆ ಯುದ್ಧದ ಕಾರ್ಮೋಡ ಕವಿದೇ ಇತ್ತು. ಉಕ್ರೇನಿನಲ್ಲಿರುವ ಭಾರತೀಯರಿಗೆ ವಾಪಸಾಗಲು ಸಾಕಷ್ಟು ಕಾಲಾವಕಾಶವಿತ್ತು. ಅದಕ್ಕೆ ಪೂರಕವಾಗಿ ಭಾರತ ಸರ್ಕಾರವೂ ಎಲ್ಲರಿಗೂ ತಿರುಗಿ ಬರುವ ಸಲಹೆ ಕೊಟ್ಟಿತ್ತಲ್ಲದೇ, ಪರಿಸ್ಥಿತಿ ಉಲ್ಬಣಿಸುತ್ತಿರುವುದರ ಬಗ್ಗೆ ನಿರಂತರ ಸೂಚನೆಗಳನ್ನು ಕೊಡುತ್ತಲೇ ಬಂದಿತ್ತು. ಫೆಬ್ರವರಿ 22, 23, 24ರಂದು ಏರ್ ಇಂಡಿಯಾದ ವಿಶೇಷ ವಿಮಾನಗಳನ್ನು ಯೋಜಿಸಲಾಯಿತು. ಆದರೆ ಅವಕ್ಕೆ ಬುಕಿಂಗ್ ಆಗಲೇ ಇಲ್ಲ. ಅರ್ಥಾತ್ ಉಕ್ರೇನ್ ನಿಂದ ಹೊರಬರುವ ಅವಸರವೇ ಹೆಚ್ಚಿನ ಭಾರತೀಯರಿಗೆ ಇದ್ದಿರಲಿಲ್ಲ.

 

ಇವೆಲ್ಲವನ್ನೂ ಉಪೇಕ್ಷಿಸಿದವರು ಈಗ ತಮ್ಮ ಆತಂಕವನ್ನು ಭಾರತದ ವಿರುದ್ಧದ ಆಕ್ರೋಶವಾಗಿಸಿಬಿಟ್ಟ ಮಾತ್ರಕ್ಕೆ ಅದರಲ್ಲಿ ತರ್ಕವಿದೆಯೆ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!