ದಿಗಂತ ವರದಿ ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಕಸ ವಿಲೇವಾರಿ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನದ ಮೂರು ಕೋಟಿ ರೂ.ವೆಚ್ಚದ ಕಸ ವಿಲೇವಾರಿ ಘಟಕ ಕಾರ್ಯಾರಂಭ ಮಾಡಿದೆ.
ಭುವನಗಿರಿಯ ಈ ಕಸ ವಿಲೇವಾರಿ ಘಟಕದಿಂದಾಗಿ ಕಳೆದ ಕೆಲವು ವರ್ಷಗಳಿಂದ ಸ್ಥಳೀಯರಿಗೆ ಭಾರೀ ದುರ್ವಾಸನೆಯ ಜೊತೆಗೆ ಅಕ್ಕಪಕ್ಕದ ಪ್ರದೇಶಗಳಲ್ಲಿ ರೋಗ ರುಜಿನಗಳು ಹರಡುತ್ತಿತ್ತು. ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಅನೇಕ ಬಾರಿ ಕೂಡಿಗೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ ಘಟನೆಗಳೂ ನಡೆದಿದ್ದವು. ಅಲ್ಲದೆ ಗ್ರಾಮ ಪಂಚಾಯತಿ ವತಿಯಿಂದ ಕುಶಾಲನಗರ ಪಟ್ಟಣ ಪಂಚಾಯತಿಗೆ ಕಸ ವಿಲೇವಾರಿ ಘಟಕವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿತ್ತು.
ಅದರಂತೆ ಕುಶಾಲನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯವರ್ಧನ್ ಸೇರಿದಂತೆ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸ್ಧಳ ಪರಿಶೀಲನೆ ನಡೆಸಿ ಸಾರ್ವಜನಿಕರು ಮತ್ತು ಸ್ಥಳೀಯ ರೈತರ ದೂರಿನನ್ವಯ ಪಟ್ಟಣ ಪಂಚಾಯತ್ ಮಾಸಿಕ ಸಭೆಯಲ್ಲಿ ಚರ್ಚಿಸಿ ಸಮಗ್ರವಾದ ಯೋಜನೆ ರೂಪಿಸಿ, ಅದರ ಮೂಲಕ ಕ್ರಿಯಾ ಯೋಜನೆ ತಯಾರಿಸಿದ್ದರು.
ಅದಾದ ಬಳಿಕ ಈ ಉದ್ದೇಶಕ್ಕಾಗಿ ಹಣವನ್ನು ಕಾಯ್ದಿರಿಸಿದ್ದು, ಇದೀಗ ಜಾಗದ ಸರ್ವೆ ನಡೆಸಿ, ಆಧುನಿಕ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮತ್ತು ಘನ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್( ಕೇಶವ್) ಅವರು ತಿಳಿಸಿದ್ದಾರೆ.
ಮೂರು ಕೋಟಿ ವೆಚ್ಚ ಈ ಕಸ ವಿಲೇವಾರಿ ಘಟಕದಲ್ಲಿ ಒಣ ಮತ್ತು ಹಸಿ ಕಸವನ್ನು ವ್ಯವಸ್ಥಿತವಾಗಿ ಬೇರ್ಪಡಿಸುವುದು ಮತ್ತು ಸರಕಾರದ ನಿಯಮನುಸಾರ ರಾಷ್ಟ್ರೀಯ ಮಟ್ಟದ ಬೃಹತ್ ಮಹಾನಗರಗಳಲ್ಲಿ ಅಳವಡಿಕೆ ಮಾಡಿರುವ ಮಾದರಿಯಂತೆ ಕಸ ವಿಲೇವಾರಿಯನ್ನು ಅಧುನಿಕ ತಂತ್ರಜ್ಞಾನದ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.