ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಉಪಕರಣ ಹಾಗೂ ನವೀಕರಣಗೊಂಡ ವಿಭಾಗವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.
ಬಳಿಕ ಎಂ.ಪಿ.ಅಪ್ಪಚ್ಚುರಂಜನ್ ಅವರು ತಮ್ಮ ದಂತವನ್ನು ಸ್ವಚ್ಛಗೊಳಿಸಿಕೊಳ್ಳುವ ಮೂಲಕ ನವೀಕರಣಗೊಂಡ ದಂತ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಎಂ.ಪಿ.ಅಪ್ಪಚ್ಚುರಂಜನ್ ಅವರು, ದಂತ ಚಿಕಿತ್ಸೆಗಾಗಿ ಮೈಸೂರು ಮತ್ತು ಮಂಗಳೂರಿಗೆ ಹೋಗಬೇಕಿತ್ತು, ಸದ್ಯ ಅತ್ಯಾಧುನಿಕ ದಂತ ಉಪಕರಣಗಳನ್ನು ಒಳಗೊಂಡ ಚಿಕಿತ್ಸಾ ವಿಭಾಗವನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಆ ದಿಸೆಯಲ್ಲಿ ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಕೇದರನಾಥ ಅವರು ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿಯೇ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ದಂತ ಚಿಕಿತ್ಸಾ ವಿಭಾಗದಲ್ಲಿ ದಂತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.
ಮುಖ, ದವಡೆ, ಸೇರಿದಂತೆ ಮತ್ತಿತರ ಪ್ರಮುಖ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ 40 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ್, ಡಾ.ಜಯಲಕ್ಷ್ಮೀ ಎಂ.ಪಾಟ್ಕರ್ ಡಾ.ದೀಪಾ, ಡಾ.ಮನ್ಪ್ರೀತ್, ಡಾ.ಧ್ಯಾನ್ ಕುಶಾಲಪ್ಪ, ಡಾ.ಸಾಗರ್ ಮತ್ತಿತರರು ಇದ್ದರು.