ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…
ಇವತ್ತು ನವೆಂಬರ್ 1. ಕನ್ನಡಿಗರ ಹೃದಯ ತುಂಬುವ ದಿನ. ನಾಡ ಹಬ್ಬ, ಕನ್ನಡ ರಾಜ್ಯೋತ್ಸವ ಆಚರಿಸುವ ದಿನ. ಇದು ಕೇವಲ ಒಂದು ಹಬ್ಬವಲ್ಲ, ನಮ್ಮ ನಾಡು, ನುಡಿ, ಸಂಸ್ಕೃತಿಯ ಅಸ್ತಿತ್ವವನ್ನು ಸ್ಮರಿಸುವ ಗೌರವದ ಕ್ಷಣ, ಕೆಂಪು-ಹಳದಿ ಧ್ವಜಗಳು ಹಾರಾಡುವ ಈ ದಿನ, ಕನ್ನಡಿಗರ ಒಗ್ಗಟ್ಟಿನ ಪ್ರತೀಕವಾದ ದಿನ.
ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ. 1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಅದಕ್ಕೂ ಮುನ್ನ ಕನ್ನಡ ಮಾತನಾಡುವ ಜನರು ವಿಭಿನ್ನ ಪ್ರಾಂತಗಳಲ್ಲಿ ಇದ್ದರು. ಬಾಂಬೆ, ಮದ್ರಾಸ್, ಹೈದರಾಬಾದ್ ಹಾಗೂ ಮೈಸೂರು ರಾಜ್ಯಗಳ ವ್ಯಾಪ್ತಿಯಲ್ಲಿ. ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್‌ರಚನೆ ನಡೆದಾಗ, ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದಾಗಿಸಿ “ಮೈಸೂರು ರಾಜ್ಯ”ವನ್ನು ರಚಿಸಲಾಯಿತು. ನಂತರ 1973ರಲ್ಲಿ ಇದಕ್ಕೆ “ಕರ್ನಾಟಕ” ಎಂಬ ಹೆಸರನ್ನು ನೀಡಲಾಯಿತು.
ಇತಿಹಾಸದ ಬೆಳಕು:
ರಾಜ್ಯೋತ್ಸವದ ಹಿನ್ನಲೆ 1956ರ ರಾಜ್ಯ ಪುನರ್‌ರಚನೆ ಕಾಯ್ದೆಗೆ ಸಂಬಂಧಿಸಿದೆ. ಆ ಸಮಯದಲ್ಲಿ ಭಾರತದ ಎಲ್ಲ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ಪುನರ್‌ರಚಿಸಲಾಯಿತು. ಕನ್ನಡ ಭಾಷೆಯ ಪ್ರದೇಶಗಳನ್ನು ಒಂದಾಗಿಸುವ ಹೋರಾಟದಲ್ಲಿ ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಆಯ್ಕೆ ಮಾಡಲಾಯಿತು, ಇದರ ಮಾನ್ಯತೆ ಆಲೂರು ವೆಂಕಟರಾವ್ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಕಾರಣರಾದ ಸಾಹಿತಿಗಳಾದ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ. ಎನ್. ಕೃಷ್ಣ ರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯರಿಗೂ ಸೇರುತ್ತದೆ.
ನಮ್ಮ ನಾಡಿನ ಗೌರವ:
ಇಂದು ಕನ್ನಡ ರಾಜ್ಯೋತ್ಸವವು ಕೇವಲ ಹಬ್ಬವಲ್ಲ, ಇದು ನಮ್ಮ ಸಂಸ್ಕೃತಿಯ ಸಂಭ್ರಮ. ಕರ್ನಾಟಕದ ಜನರು ತಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳನ್ನ ಸಂರಕ್ಷಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. “ಏಕ ನಾಡು, ಏಕ ನುಡಿ” ಎಂಬ ಘೋಷಣೆಯ ಅಡಿಯಲ್ಲಿ ರಾಜ್ಯೋತ್ಸವವು ನಮ್ಮೆಲ್ಲರಿಗು ನಾಡಿನ ಅಭಿಮಾನವನ್ನು ಪುನರುಜ್ಜೀವನಗೊಳಿಸುವ ದಿನವಾಗಿದೆ.
ಕನ್ನಡ ರಾಜ್ಯೋತ್ಸವ ನಮ್ಮ ಭೂಮಿ, ನುಡಿ ಮತ್ತು ಸಂಸ್ಕೃತಿಯ ಸಂಕೇತ. ನವೆಂಬರ್ 1 ಕೇವಲ ದಿನಾಂಕವಲ್ಲ, ಅದು ಕನ್ನಡಿಗರ ಹೆಮ್ಮೆ, ಅಸ್ತಿತ್ವ ಮತ್ತು ಒಗ್ಗಟ್ಟಿನ ಪ್ರತೀಕ. ಆದ್ದರಿಂದ ಈ ದಿನವನ್ನು “ನಾಡ ಹಬ್ಬ” ಎಂದು ಕರೆಯುವುದು ಕೇವಲ ಸಂಪ್ರದಾಯವಲ್ಲ, ಅದು ನಮ್ಮ ಮನದ ಭಾವನೆ.

