ಅಜ್ಞಾನಿಗಳಿಗೆ ಶಿವರಾತ್ರಿ ಜ್ಞಾನ ನೀಡುವ ದಾರಿದೀಪ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಹೊಸದಿಗಂತ ವರದಿ, ಚಿತ್ರದುರ್ಗ

ಅಜ್ಞಾನಿಗಳಿಗೆ ಜ್ಞಾನದ ಬೆಳಕು ನೀಡಲು ಈ ಶಿವರಾತ್ರಿ ಮಹೋತ್ಸವ ಸಪ್ತಾಹ ದಾರಿದೀಪವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಕಬೀರಾನಂದಾಶ್ರಮದ ವತಿಯಿಂದ ೯೨ನೇ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶಿವನಾಮ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮ ಮಠಾಧೀಶರಿಗಿಂತ ಭಕ್ತರಿಗೆ ಹೆಚ್ಚಿನ ರೀತಿಯ ಅಗತ್ಯ. ಮಾನವನಲ್ಲಿ ಅಡಗಿರುವ ಕತ್ತಲೆಯನ್ನು ಶಿವರಾತ್ರಿ ಆಚರಣೆ ಮೂಲಕ ಕಳೆದುಕೊಳ್ಳಬೇಕಿದೆ. ಶಿವರಾತ್ರಿ ಅಂಧಕಾರ ನಿವಾರಿಸುವ ಕೆಲಸ ಮಾಡುತ್ತದೆ. ಅದನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪಡೆಯಬೇಕಿದೆ ಎಂದರು.
ಮಾನವನ ದೇಹಕ್ಕೆ ಶೇ.೪೦ ರಷ್ಟು ಆಹಾರ ಅನ್ನದಿಂದ ಬಂದರೆ, ಉಳಿದ ಶೇ.೬೦ ರಷ್ಟು ಆಹಾರ ಗಾಳಿಯಿಂದ ಸಿಗುತ್ತದೆ. ಮನಸ್ಸು ಸಂಸ್ಕಾರದಿಂದ ಸಾಗಬೇಕಿದೆ. ಇದರಿಂದ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತವೆ. ಮನಸ್ಸು ಎಂಬ ಬ್ಯಾಟರಿ ಚಾರ್ಜ್ ಮಾಡಬೇಕಾದರೆ ಇಂತಹ ಕಾರ್ಯಕ್ರಮಗಳು ಮುಖ್ಯ. ಹಿಂದಿನ ದಿನಗಳಲ್ಲಿ ಹಿರಿಯರು ನಮ್ಮ ನುಡಿಗಳಿಂದ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಮನಸ್ಸನ್ನು ಸಂಸ್ಕಾರ ಮತ್ತು ಸತ್ಸಂಗಕ್ಕೆ ಒಳಪಡಿಸಬೇಕಿದೆ ಎಂದು ತಿಳಿಸಿದರು.
ದಾಬಸ್‌ಪೇಟೆಯ ಮನಕಲ್ಲು ಮಲ್ಲೇಶ್ವರ ಮಠದ ರಮಾನಂದ ಸ್ವಾಮೀಜಿ ಮಾತನಾಡಿ, ಆಶ್ರಮದಿಂದ ಅನ್ನ ಮತ್ತು ಶಿಕ್ಷಣದ ದಾಸೋಹ ನಡೆಯುತ್ತಿದೆ. ಅನ್ನ ಕ್ಷಣಿಕ ತೃಪ್ತಿ ನೀಡುತ್ತದೆ. ಆದರೆ ಶಿಕ್ಷಣ ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಯಲ್ಲಿಯೇ ಇರುತ್ತದೆ. ವಿದ್ಯೆ ಸದಾ ಮಾನವನನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ. ಜೊತೆಗೆ ಜಗತ್ತಿಗೆ ಪರಿಚಯಿಸುವ ಕಾರ್ಯ ಸಹ ಮಾಡುತ್ತದೆ. ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗುತ್ತಿವೆ. ಶಿವರಾತ್ರಿಯಂದು ಶಿವನಾಮ ಮಂತ್ರ ಜಪಿಸುತ್ತಿರುಬೇಕು ಎಂದರು.
ಮಾಜಿ ಸಚಿವ ಹೆಚ್.ಅಂಜನೇಯ ಮಾತನಾಡಿ, ಕಬೀರಾನಂದಾಶ್ರಮ ಯಾವುದೇ ಧರ್ಮ, ಜಾತಿ ವರ್ಗಕ್ಕೆ ಸೀಮಿತವಾಗಿರದೆ ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಆಶ್ರಮವಾಗಿದೆ. ಇಲ್ಲಿನ ಶ್ರೀಗಳಲ್ಲಿ ತಾಯಯ್ತನವಿದೆ. ಎಲ್ಲರನ್ನು ಪ್ರೀತಿಯಿಂದ ನೋಡುವ ಗುಣ ಹೊಂದಿದ್ದಾರೆ. ನಗರದ ಹೂರಗಡೆ ಇರುವ ಗೋಶಾಲೆಯ ಆವರಣದಲ್ಲಿ ವಸತಿ ಶಾಲೆ ಪ್ರಾರಂಭ ಮಾಡುವಂತೆ ಶ್ರೀಗಳಲ್ಲಿ ಮನವಿ ಮಾಡಿದರು.
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಶ್ರೀ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಅವಧೂತರು, ಶ್ರೀ ಶಿವಲಿಂಗಾನಂದ ಶ್ರೀಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಾಟಕ ಅಕಾಡೆಮಿ ಅಧ್ಯಕ್ಷ ಆರ್.ಬೀಮಸೇನ್ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಜಿ.ಮೂಡಲಗಿರಿಯಪ್ಪ, ನಗರಸಭೆ ಸದಸ್ಯೆ ರೇಖಾ ಮಂಜುನಾಥ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ರೇಖಾ, ವಿ.ಆರ್.ನಾಗರಾಜ್, ಡಿ.ರಾಜು, ಭಾಗವಹಿಸಿದ್ದರು.
ಸುಬ್ರಾಯ ಭಟ್ ವೇದ ಘೋಷ ಮಾಡಿದರು, ಶಿಕ್ಷಕಿ ಜ್ಯೊತಿ ಪ್ರಾರ್ಥಿಸಿದರು. ವಿ.ಎಲ್.ಪಶಾಂತ್ ಸ್ವಾಗತಿಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!