ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿ ಒಂದು ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಮುಖ್ಯಮಂತ್ರಿಗಳು ಉತ್ತರಿಸಿದರು.
ಸಿದ್ದರಾಮಯ್ಯ ಅವರು, ನಾವು ಮೇಕೆದಾಟು ಯೋಜನೆ ಮಾಡಬೇಕೆಂದು ನಾವು ಪಾದಯಾತ್ರೆ ಮಾಡಿದೆವು. ಇವರೆಲ್ಲ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ ಎನ್ನುತ್ತಿದ್ದರು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಮೇಕೆದಾಟುವಿಗೆ ಸಂಬಂಧಪಟ್ಟಂತೆ ತಮಿಳುನಾಡು, ಕೇರಳ, ಕರ್ನಾಟಕ, ಪಾಂಡಿಚೇರಿ ರಾಜ್ಯಗಳಲ್ಲಿ ಜಲವಿವಾದವಿತ್ತು. ಕಾವೇರಿ ನ್ಯಾಯಾಧಿಕರಣ 2007ರಲ್ಲಿ ತೀರ್ಪು ಕೊಟ್ಟಿದ್ದಾರೆ. ಕೇಂದ್ರ ಸರಕಾರ 2013ರಲ್ಲಿ ನೋಟಿಫಿಕೇಶನ್ ಮಾಡಿದೆ. 2018ರಲ್ಲಿ ಎಲ್ಲರೂ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆವು. ಸುಪ್ರೀಂ ಕೋರ್ಟ್ ಕಾವೇರಿ ಅಂತರ್ ರಾಜ್ಯ ಜಲವಿವಾದ ಸಂಬಂಧಿಸಿ 2018 ಫೆಬ್ರವರಿ 16ರಂದು ಅಂತಿಮ ತೀರ್ಪು ಕೊಟ್ಟಿದೆ. ಅಂತಿಮವಾಗಿ ತಮಿಳುನಾಡಿಗೆ 177.75 ಟಿಎಂಸಿ ನೀರು ಹಂಚಿಕೆ ಮಾಡಿದೆ.
ಹೀಗಿದ್ದಾಗ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಯಾವುದೇ ವಿವಾದ ಇಲ್ಲ. ಮೇಕೆದಾಟು ಯೋಜನೆ ಜಾರಿ ಮಾಡಲು ತಮಿಳುನಾಡು ತಕರಾರು ತೆಗೆಯಲು ಯಾವುದೇ ಹಕ್ಕು ಇಲ್ಲ. ಕಳೆದ ಏಳು ವರ್ಷಗಳಲ್ಲಿ ಎಷ್ಟು ನೀರು ತಮಿಳುನಾಡಿಗೆ ಹೋಗಿದೆ ಗೊತ್ತಾ? ವರ್ಷಕ್ಕೆ ಹಂಚಿಕೆಯಾದ 177.75 ಟಿಎಂಸಿ ಅಲ್ಲದೇ ಹೆಚ್ಚುವರಿಯಾಗಿ 582 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಇದು ನಮ್ಮ ನೀರು, ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರ ಸೇರುತ್ತದೆ. ಅದಕ್ಕೆ ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವ್‌ವಿಯರ್ ನಿರ್ಮಾಣ ಮಾಡಬೇಕೆಂದು ಹೇಳುತ್ತಿದ್ದೇವೆ ಎಂದರು.
ವಿವಾದ ಇಲ್ಲ ಅನ್ನುವುದು ಸರಿಯಲ್ಲ:
ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಸುಪ್ರೀಂ ಕೋರ್ಟ್ ತಮಿಳುನಾಡಿನಂತೆ ಕರ್ನಾಟಕಕ್ಕೂ ನೀರು ಹಂಚಿಕೆ ಮಾಡಿದೆ. ಮಿಕ್ಕಿದ ನೀರೆಲ್ಲ ಕರ್ನಾಟಕದ್ದು ಎಂದು ಸುಪ್ರೀಂ ಕೋರ್ಟ್ ಎಲ್ಲಿಯೂ ಹೇಳಿಲ್ಲ. ಹೆಚ್ಚುವರಿ ನೀರನ್ನು ಏನು ಮಾಡಬೇಕೆಂದು ಈವರೆಗೆ ನಿರ್ಧಾರವೇ ಆಗಿಲ್ಲ. ಹೆಚ್ಚುವರಿ ನೀರಿನ ವಿವಾದ ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ನಿಮಗೆ ಹಂಚಿಕೆಯಾದ ನೀರಿಗಿಂತ ಜಾಸ್ತಿ ಬಳಸಿಕೊಳ್ಳಬಾರದು ಎಂಬುದೇ ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ವಾದ. ಬೆಂಗಳೂರು ನಗರದ ಒಸರು (ಸೀಪೇಜ್) ನೀರನ್ನು ಕೂಡ ತಮಿಳುನಾಡಿಗೆ ಇಷ್ಟು ಅಂತ ನೀಡಬೇಕು. ಅದನ್ನು ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹರಿಸಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ. ವೇರ್ ಈಸ್ ದಿ ಡಿಸ್‌ಪ್ಯೂಟ್ ಅಂತ ಸಭೆಗೆ ಹೇಳಿದ್ರೆ ಗತಿ ಏನು? ದೇರ್ ಈಸ್ ಡಿಸ್‌ಪ್ಯೂಟ್, ವಿ ಆರ್ ಫೈಟಿಂಗ್ ದೆಟ್. ಮೇಕೆದಾಟು ಬಗ್ಗೆ ಮಾತಾಡಿ, ಆದರೆ ವಿವಾದ ಇಲ್ಲ ಅಂತ ಮಾತ್ರ ಹೇಳಬೇಡಿ ಎಂದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಕಾರ ತಮಿಳುನಾಡಿನವರಿಗೆ ಪ್ರಶ್ನಿಸುವ ಯಾವುದೇ ಹಕ್ಕು ಇಲ್ಲ. ಅವರು ಕೋರ್ಟಿಗೆ ಹೋಗಿರಬಹುದು ಅದು ಬೇರೆ ವಿಚಾರ. ಸುಪ್ರೀಂ ಕೋರ್ಟ್ ಅವರಿಗೆ ತಡೆಯಾಜ್ಞೆ ಕೊಡಬಹುದಿತ್ತು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಡೆಯಾಜ್ಞೆ ಕೊಟ್ಟಿರುವುದನ್ನು ರದ್ದು ಮಾಡಿದ್ದಾರೆ. ತಮಿಳುನಾಡಿನವರು ರಾಜಕಾರಣ, ಓಟಿಗಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅದು ಬಿಟ್ಟರೆ ಕಾನೂನಾತ್ಮವಾಗಿ ಹಾಗೂ ಸಂವಿಧಾನಾತ್ಮಕವಾಗಿ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು.
ವಿವಾದತ್ಮಕವೆಂಬ ಕೇಂದ್ರದ ನಿಲುವು ಖಂಡಿಸುತ್ತೇನೆ:
ಮೊನ್ನೆ ರಾಜ್ಯಕ್ಕೆ ಬಂದ ಕೇಂದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇದು ವಿವಾದಾತ್ಮಕ ವಿಚಾರ, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಎರಡೂ ರಾಜ್ಯಗಳು ಮಾತಾಡಿ, ವಿವಾದ ಬಗೆಹರಿಸಿಕೊಳ್ಳಲಿ. ನಾವು ಅದಕ್ಕೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಕೂಡ ಆ ಸಭೆಯಲ್ಲಿದ್ರು. ಕೇಂದ್ರ ಸರಕಾರದವರೇ ಇದನ್ನು ವಿವಾದಾತ್ಮಕ ವಿಚಾರ ಎನ್ನುವುದನ್ನು ನಾನು ಖಂಡಿಸುತ್ತೇನೆ. ಅಲ್ಲಿ ಮುಖ್ಯಮಂತ್ರಿಗಳು ಕೂತಿದ್ರೂ ಅದನ್ನು ವಿರೋಧ ಮಾಡದೇ ಕೇಳಿಕೊಂಡು ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಅದಕ್ಕೆ ಉತ್ತರಿಸಿದರ ಸಿಎಂ, ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವ್‌ವಿಯರ್ ಮಾಡಬೇಕೆಂಬ ಕರ್ನಾಟಕದ ಯೋಜನೆ ಇವತ್ತಿದ್ದಲ್ಲ. ಕಾವೇರಿ ವಿವಾದ ಇದ್ದಾಗಲೂ ಮೇಕೆದಾಟು ಮಾಡಬೇಕೆಂದು ಇತ್ತು. ಮೊದಲು ಇದು ಪವರ್ ಡ್ಯಾಂ ಆಗಿತ್ತು. 1996ರಲ್ಲಿ ಕೆಪಿಟಿಸಿಎಲ್ ನವರು ಡಿಪಿಆರ್ ಮಾಡಿದ್ದರು. ನಂತರ 2018ರಲ್ಲಿ ಮಾಡಿದ ಡಿಪಿಆರ್ ಕಾವೇರಿ ಜಲ ನಿರ್ವಹಣಾ ಮಂಡಳಿಯ ಮುಂದಿದೆ. ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯನ್ನೂ ಪಡೆಯಬೇಕಿದೆ. ಮೇಕೆದಾಟು ಸಂಬಂಧಿಸಿ ಒಂದು ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುತ್ತದೆ. ಕಾನೂನು ತಜ್ಞರನ್ನು ಕರೆಸುತ್ತೇವೆ, ಕಾನೂನಾತ್ಮಕ ವಿಚಾರಗಳನ್ನು ಸಭೆಯ ಮುಂದೆ ಇಡಲಾಗುತ್ತದೆ. ಕಾವೇರಿ ನ್ಯಾಯ ಮಂಡಳಿಯ ನೀರು ಹಂಚಿಕೆ ತಿರ್ಮಾನದಂತೆ ತಮಿಳುನಾಡಿಗೆ ನೀರು ಹರಿಸುವುದು ಬಿಟ್ಟರೆ, ನಮ್ಮ ಯಾವುದೇ ಹೊಣೆಗಾರಿಕೆ ಇಲ್ಲ ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಆದಷ್ಟು ಬೇಗ ಮೇಕೆದಾಟು ಕೆಲಸ ಪ್ರಾರಂಭಿಸಬೇಕು ಎಂದು ತಿಳಿಸಿದರು.