ಹೊಸ ದಿಗಂತ ವರದಿ, ಅಂಕೋಲಾ:
ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿಯ ತಳಭಾಗ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದ ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಅವರು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿರ್ಮಲ ಹೃದಯ ಶಾಲೆಯ ಆಡಳಿತ ಮಂಡಳಿ ಡಯಾಸಿಸ್ ಎಜ್ಯುಕೇಶನ್ ಸೊಸೈಟಿ ನಿರ್ಲಕ್ಷ್ಯತನದ ಪರಿಣಾಮವಾಗಿ ತರಗತಿಯಲ್ಲಿ ಅವಘಡ ಸಂಭವಿಸಿದ್ದು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಬೆಳಗ್ಗೆ ಶಾಲೆಯ ಊಟದ ವಿರಾಮದ ಸಮಯದಲ್ಲಿ ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಮೇಲ್ಛಾವಣಿಯ ತಳಭಾಗದ ಕಾಂಕ್ರೀಟ್ ಪದರು ಕುಸಿದು 5 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದರಿಂದ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ನಂತರ ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿ ಕುರಿತು ವಿದ್ಯಾರ್ಥಿಗಳ ಪಾಲಕರಿಂದ ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು ತಹಶೀಲ್ಧಾರ ಉದಯ ಕುಂಬಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಮತ್ತು ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡುವಂತೆ ತಹಶೀಲ್ಧಾರರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮುಗಿಲನ್ ಸಹ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರಲ್ಲದೇ ಘಟನೆಯ ಕಾರಣಗಳ ಕುರಿತು ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಗುರುವಾರ ಮದ್ಯಾಹ್ನ ಲೋಕೋಪಯೋಗಿ ಇಲಾಖೆಯ ಸಹಾಯಕ ಅಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಶಾಲೆಯ ಪ್ರಾಥಮಿಕ ವಿಭಾಗದ ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ಧು ಶಾಲಾ ಕೊಠಡಿಗಳ ಸುರಕ್ಷತೆ ಕುರಿತು ಆಡಳಿತ ಮಂಡಳಿಯಿಂದ ಪ್ರಮಾಣಪತ್ರ ಒದಗಿಸಿದ ನಂತರ ತರಗತಿಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.