ಹೊಸದಿಗಂತ ವರದಿ, ಮಂಗಳೂರು
ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020ರ ಜನವರಿ ತಿಂಗಳಿನಲ್ಲಿ ಬಾಂಬ್ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ ದೋಷಿ ಎಂದು ತೀರ್ಪು ನೀಡಿರುವ ದ.ಕ. ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಆತನಿಗೆ 20 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ.
ಅಪರಾಧಿಗೆ ಸ್ಪೋಟಕ ತಡೆ ಕಾಯ್ದೆಯಡಿ 5 ವರ್ಷ ಹಾಗೂ ಯುಎಪಿಎ ಕಾಯ್ದೆಯಡಿ 20 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.
2020ರ ಜನವರಿ ತಿಂಗಳಿನಲ್ಲಿ ಆದಿತ್ಯ ರಾವ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ. ರಿಕ್ಷಾವೊಂದರಲ್ಲಿ ಚಾಲಕ ಸೇರಿದಂತೆ ಇಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ ಪೈಕಿ ಆದಿತ್ಯ ರಾವ್ ಆಟೋ ರಿಕ್ಷಾದಿಂದ ಇಳಿದು ಸ್ಪೋಟಕ ತುಂಬಿದ ಬ್ಯಾಗನ್ನು ನಿರ್ಗಮನ ದ್ವಾರದ ಸಮೀಪದ ಟಿಕೆಟ್ ಕೌಂಟರ್ ಬಳಿಯಿರುವ ಆಸನದ ಮೇಲಿರಿಸಿ ಅಲ್ಲಿಂದ ತೆರಳಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಘಟನೆ ನಡೆದು ಎರಡು ದಿನಗಳ ಬಳಿಕ ಆರೋಪಿ ಆದಿತ್ಯ ರಾವ್ ಬೆಂಗಳೂರಿಗೆ ತೆರಳಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಆತನನ್ನು ಹಲಸೂರು ಗೇಟ್ ಪೊಲೀಸ್
ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ನಂತರ ಮಂಗಳೂರು ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ ಆತನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು.
ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿದ್ದ ಶಂಕಾಸ್ಪದ ವಸ್ತುಗಳು ಸ್ಪೋಟಕಗಳಾಗಿತ್ತು ಎಂಬುದು ವಿಧಿವಿಜ್ಞಾನ ಪರೀಕ್ಷೆಯಿಂದ ಸಾಬೀತಾಗಿತ್ತು. ಆದಿತ್ಯ ರಾವ್ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ಮಂಗಳೂರಿನ ಜೆಎಂಎಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ
ಆತನನ್ನು ತಪ್ಪಿತಸ್ಥ ಎಂದು ಪರಿಗಣಿಸಿ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಆರೋಪಿ ದುಷ್ಕೃತ್ಯ ಎಸಗಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳನ್ನು ಇರಿಸಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಆದಿತ್ಯ ರಾವ್ ಈ ಹಿಂದೆ ಕೆಲಸ ಕೇಳಿಕೊಂಡು ಹೋದಾಗ, ತನಗೆ ಕೆಲಸ ನೀಡಿಲ್ಲ ಎಂಬ ಕೋಪದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ.
ಎಂಬಿಎ ವಿದ್ಯಾಭ್ಯಾಸ ಪಡೆದಿರುವ ಆದಿತ್ಯ ರಾವ್ ಇದಕ್ಕೂ ಮುನ್ನ ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಯಲ್ಲಿದ್ದ. ಒಂದು ವರ್ಷ ಅಲ್ಲಿ ಕೆಲಸ ಮಾಡಿದ ಬಳಿಕ ಇನ್ನೊಂದು ಬ್ಯಾಂಕ್ ಸೇರಿಕೊಂಡಿದ್ದ. ಅಲ್ಲಿ ಕೇವಲ ಆರು ತಿಂಗಳು ಕೆಲಸ ಮಾಡಿದ ಬಳಿಕ ಮೊದಲನ ಬ್ಯಾಂಕ್ಗೇ ಸೇರಿಕೊಂಡ. ಉತ್ತಮ ವೇತನವಿದ್ದ ಈ ಕೆಲಸ ಬಿಟ್ಟು ಮೂಡುಬಿದರೆಯ ಕಾಲೇಜೊಂದರಲ್ಲಿ ಸೆಕ್ಯುರಿಟಿ ಹುದ್ದೆಯಲ್ಲಿ ಸೇರ್ಪಡೆಗೊಂಡಿದ್ದ. ಅಲ್ಲೂ ಕೆಲ ದಿನವಿದ್ದು, ಬಳಿಕ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆಕ್ಯುರಿಟಿ ಆಗಿದ್ದ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ