ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನಗಳಲ್ಲಿ ಪ್ರಗತಿ ಕಂಡರೂ, ಕ್ಯಾನ್ಸರ್ ಇಂದಿಗೂ ಮಾನವ ಕುಲಕ್ಕೆ ದೊಡ್ಡ ಸವಾಲಾಗಿಯೇ ಉಳಿದಿದೆ. ಮೊದಲ ಹಂತದಲ್ಲೇ ಪತ್ತೆಯಾದರೆ ಈ ರೋಗವನ್ನು ನಿಗ್ರಹಿಸಬಹುದು, ಆದರೆ ಜೀವನಶೈಲಿ, ಒತ್ತಡ ಮತ್ತು ಅಸಮತೋಲಿತ ಆಹಾರ ಪದ್ಧತಿಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಅದೃಷ್ಟವಶಾತ್, ಕೆಲವು ನೈಸರ್ಗಿಕ ಆಹಾರಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡುವ ಮೂಲಕ ಮತ್ತು ಜೀವಕೋಶದ ಹಾನಿ ತಡೆಯುವ ಮೂಲಕ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಹೊಂದಿವೆ.
- ಬೆರ್ರಿ ಹಣ್ಣುಗಳು: ಬ್ಲೂಬೆರ್ರಿಗಳು, ಬ್ಲ್ಯಾಕ್‌ಬೆರ್ರಿಗಳು ಮತ್ತು ರಾಸ್ಪ್ಬೆರಿಗಳು ಆಂಥೋಸಯಾನಿನ್, ಎಲಾಜಿಕ್ ಆಮ್ಲ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವು ಡಿಎನ್‌ಎಯನ್ನು ಹಾನಿಯಿಂದ ರಕ್ಷಿಸಿ, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ.
- ಕಿವಿ ಹಣ್ಣು: ಕಿವಿ ಹಣ್ಣು ವಿಟಮಿನ್ ಸಿ, ಫೈಬರ್ ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ತುಂಬಿದೆ. ಇದು ಜೀವಕೋಶಗಳ ದುರಸ್ತಿ ಪ್ರಕ್ರಿಯೆ ಸುಧಾರಿಸಲು ಸಹಾಯಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿವಿ ಹಣ್ಣು ಸೇವನೆಯು ಶ್ವಾಸಕೋಶ, ಬಾಯಿ ಮತ್ತು ಹೊಟ್ಟೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
- ಬೀನ್ಸ್‌ಗಳು: ಬೀನ್ಸ್ ಫೈಬರ್, ಸಸ್ಯ ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇವು ದೇಹದಿಂದ ವಿಷಕಾರಕ ತತ್ವಗಳನ್ನು ಹೊರಹಾಕಿ, ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತವೆ. ಬೀನ್ಸ್‌ನಲ್ಲಿರುವ ಸಪೋನಿನ್ ಮತ್ತು ಫೀನಾಲಿಕ್ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ.
- ಬ್ರೊಕೊಲಿ, ಹೂಕೋಸು ಮತ್ತು ಬ್ರಸೆಲ್ಸ್ ಮೊಗ್ಗು: ಈ ತರಕಾರಿಗಳು ಗ್ಲುಕೋಸಿನೋಲೇಟ್‌ಗಳಲ್ಲಿ ಸಮೃದ್ಧವಾಗಿದ್ದು, ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ವಸ್ತುಗಳನ್ನು ನಿವಾರಣೆಗೆ ಸಹಕಾರಿಯಾಗುತ್ತವೆ. ಅವುಗಳನ್ನು ಕಚ್ಚಾ ಅಥವಾ ಲಘುವಾಗಿ ಆವಿಯಲ್ಲಿ ಬೇಯಿಸಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.
- ಸಿಹಿ ಗೆಣಸು: ಸಿಹಿ ಗೆಣಸಿನ ನೇರಳೆ ಬಣ್ಣವು ಆಂಥೋಸಯಾನಿನ್‌ಗಳಿಂದ ಬರುತ್ತದೆ, ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕ. ಇವು ಉರಿಯೂತ ಕಡಿಮೆ ಮಾಡಿ, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ. ಜೊತೆಗೆ ಫೈಬರ್ ಮತ್ತು ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಸಿಹಿ ಗೆಣಸು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

