ಹೊಸದಿಗಂತ ಡಿಜಿಟಲ್ ಡೆಸ್ಕ್
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ಟೆನ್ನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 25 ಹರೆಯದಲ್ಲಿಯೇ ನಿವೃತ್ತಿ ಘೋಷಿಸುವ ಮೂಲಕ ಬಾರ್ಟಿ ಕ್ರೀಡಾ ಲೋಕವನ್ನು ಚಕಿತಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಬಾರ್ಟಿ ನಿವೃತ್ತಿ ವಿಚಾರವನ್ನು ಘೋಷಿಸಿದ್ದಾರೆ. ಬಾರ್ಟಿ ಕ್ರೀಡಾ ಸಾಧನೆಗಳು ಅಪ್ರತಿಮವಾಗಿವೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಐಸಿಹಾಸಿಕ ದಾಖಲೆ ಬರೆದಿದ್ದರು. 44 ವರ್ಷಗಳ ಬಳಿಕ ಈ ಪ್ರಶಸ್ತಿ ಒಲಿಸಿಕೊಂಡ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಬಾರ್ಟಿ ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿ ಕ್ರೀಡಾ ಬದುಕಿನ ಔನತ್ಯದಲ್ಲಿರುವಾಗಲೇ ನಿವೃತ್ತಿ ಘೋಷಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸಾಕಷ್ಟು ಯೋಚಿಸಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಆದರೂ ಇದೊಂದು ದುಃಖದ ವಿದಾಯವಾಗಿದೆ. ಟೆನ್ನಿಸ್ ನನಗೆ ನೀಡಿದ ಎಲ್ಲಾ ಕೊಡುಗೆಗಳಿಗೆ ಕೃತಜ್ಙಳಾಗಿದ್ದೇನೆ ಎಂದು ಬಾರ್ಟಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ಖಚಿತ ಕಾರಣಗಳು ತಿಳಿದುಬಂದಿಲ್ಲ. ಎರಡು ಬಾರಿ ಟೆನ್ನಿಸ್ ನಂ.1 ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ ಆಟಗಾರ್ತಿ ಮೂರು ಗ್ರ್ಯಾನ್ ಸ್ಲಾಂಗಳ ಒಡತಿಯಾಗಿದ್ದಾರೆ.