ಮಕ್ಕಳಿಗೆ ಜ್ವರ ಬರುವುದು ಸಾಮಾನ್ಯ. ಆದರೆ ಈ ಸಮಯದಲ್ಲಿ ಪೋಷಕರಿಗೆ ಆತಂಕ ಸಹಜ. ಕೆಲವೊಮ್ಮೆ ಆತುರದಿಂದ ಮಗುವಿನ ಆರೈಕೆಯಲ್ಲಿ ಪೋಷಕರು ತಿಳಿಯದೇ ತಪ್ಪು ಕ್ರಮಗಳನ್ನು ಅನುಸರಿಸುತ್ತಾರೆ. ಈ ತಪ್ಪುಗಳು ಮಗುವಿನ ಜ್ವರ ಕಡಿಮೆಯಾಗುವುದಕ್ಕಿಂತ ಬೇರೆಯೇ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ, ಜ್ವರದ ಸಮಯದಲ್ಲಿ ಪೋಷಕರು ಮಾಡುವ ನಾಲ್ಕು ಸಾಮಾನ್ಯ ತಪ್ಪುಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
- ಕೈಗಳಿಂದ ಜ್ವರ ಪರೀಕ್ಷಿಸುವ ತಪ್ಪು: ಬಹುತೇಕ ಪೋಷಕರು ಮಗುವಿಗೆ ಜ್ವರ ಬಂದಾಗ ಬಿಸಿ ಎಷ್ಟಿದೆ ಎಂಬುದನ್ನು ಕೈಯಿಂದ ತಲೆಗೆ ಸ್ಪರ್ಶಿಸಿ ಅಂದಾಜು ಮಾಡುತ್ತಾರೆ. ಆದರೆ ಈ ವಿಧಾನ ಸಂಪೂರ್ಣ ತಪ್ಪು. ಏಕೆಂದರೆ ಕೈಗಳಿಂದ ಬರುವ ಸ್ಪರ್ಶ ನಿಖರವಾದ ತಾಪಮಾನವನ್ನು ತೋರಿಸುವುದಿಲ್ಲ. ಕೆಲವೊಮ್ಮೆ ಹಗುರವಾದ ಜ್ವರವಾಗಿದ್ದರೂ ಹೆಚ್ಚು ಎಂದು ಭಾಸವಾಗಬಹುದು ಅಥವಾ ತೀವ್ರವಾದಾಗ ಕಡಿಮೆ ಎಂದು ತಪ್ಪಾಗಿ ಅರ್ಥವಾಗಬಹುದು. ಆದ್ದರಿಂದ ಯಾವಾಗಲೂ ಥರ್ಮಾಮೀಟರ್‌ನಿಂದಲೇ ಜ್ವರ ಅಳೆಯುವುದು ಸೂಕ್ತ.
- ಡಿಜಿಟಲ್ ಥರ್ಮಾಮೀಟರ್ ಬಳಕೆ ವೇಳೆ ಎಚ್ಚರಿಕೆ: ಡಿಜಿಟಲ್ ಥರ್ಮಾಮೀಟರ್ ಬಳಕೆ ಸರಿಯಾದ ವಿಧಾನದಲ್ಲಿ ಇರಬೇಕು. ಅದು ಬಟ್ಟೆ ಅಥವಾ ಯಾವುದೇ ಮೇಲ್ಮೈಯನ್ನು ಮುಟ್ಟದಂತೆ ನೋಡಿಕೊಳ್ಳಿ. ಥರ್ಮಾಮೀಟರ್ ನಿಖರವಾದ ಸರಿಯಾದ ಸ್ಥಳದಲ್ಲಿ ಇರಿಸಿ. ಸ್ವಚ್ಛತೆಯಿಗೂ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
- ಗನ್ ಥರ್ಮಾಮೀಟರ್‌ನ ತಪ್ಪಾದ ಬಳಕೆ: ಬಹುತೇಕರು ಸುಲಭ ವಿಧಾನವಾಗಿ ಇನ್ಫ್ರಾರೆಡ್ ಗನ್ ಥರ್ಮಾಮೀಟರ್ ಬಳಸುತ್ತಾರೆ. ಆದರೆ ಈ ಸಾಧನಗಳು ಅತಿ ನಿಖರವಾಗಿರುವುದಿಲ್ಲ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಗನ್ ಥರ್ಮಾಮೀಟರ್ ಬಳಕೆ ತಪ್ಪಾದ ಮಾಹಿತಿಗೆ ಕಾರಣವಾಗಬಹುದು. ಹೀಗಾಗಿ, ಮಕ್ಕಳಿಗೆ ಡಿಜಿಟಲ್ ಥರ್ಮಾಮೀಟರ್ ಹೆಚ್ಚು ಸುರಕ್ಷಿತ ಮತ್ತು ನಿಖರವಾದ ಆಯ್ಕೆಯಾಗಿದೆ.
- ನೀರಿನಿಂದ ದೇಹ ಉಜ್ಜುವ ವಿಧಾನ: ಕೆಲವರು ಜ್ವರ ಕಡಿಮೆ ಮಾಡಲು ಮಗುವಿನ ತಲೆಗೆ ಅಥವಾ ಪಾದಗಳಿಗೆ ನೀರು ಸುರಿಯುತ್ತಾರೆ. ಆದರೆ ಈ ವಿಧಾನ ಸರಿಯಲ್ಲ. ಬದಲಿಗೆ ಉಗುರು ಬೆಚ್ಚಗಿನ ನೀರಿನಿಂದ ಮಗುವಿನ ಇಡೀ ದೇಹವನ್ನು ಒರೆಸುವುದು ಸರಿಯಾದ ಕ್ರಮ. ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿಗೆ ತಂಪು ಮತ್ತು ಆರಾಮವನ್ನು ನೀಡುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

