ಹೊಸದಿಗಂತ ವರದಿ, ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ರೈತರ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದೆ.
ಈ ಭಾಗದ ಅನೇಕ ರೈತರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳು, ಬಾಳೆ, ಬೇಸಿಗೆ ಬೆಳೆಯಾದ ಮೆಕ್ಕೆಜೋಳ, ಅಲ್ಲದೆ ಹೊಸದಾಗಿ ಮಾಡಿದ ತೋಟಗಳನ್ನು ತುಳಿದು, ತಿಂದು ಭಾರೀ ನಷ್ಟ ಉಂಟು ಮಾಡಿವೆ.
ಸೀಗೆಹೊಸೂರು ಗ್ರಾಮದ ಕುಶಾಲಪ್ಪ, ಶಂಕರ, ಲಕ್ಷ್ಮಿ, ಚಂದ್ರಶೇಖರ, ಚಂದ್ರಪ್ಪ, ಅರುಣ್, ಜಯಶೀಲಾ ಸೇರಿದಂತೆ ಗ್ರಾಮ ವ್ಯಾಪ್ತಿಯ 10ಕ್ಕೂ ಅಧಿಕ ರೈತರ ಜಮೀನಿಗೆ ಎಂಟಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿವೆ.
ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಜೇನುಕಲ್ಲು ಬೆಟ್ಟದ ಅಂಚಿನ ಮೂಲಕ ಸೀಗೆಹೊಸೂರು ಗ್ರಾಮದ ರೈತರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳು ಜಮೀನಿಗೆ ನೀರಿನ ವ್ಯವಸ್ಥೆಗೆ ಅಳವಡಿಸಿದ ಪೈಪ್’ಗಳನ್ನು ಸಂಪೂರ್ಣವಾಗಿ ತುಳಿದು ನಷ್ಟಪಡಿಸಿವೆ.
ಸ್ಧಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಅಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿ ವರ್ಗದವರು ಅಗಮಿಸಿ ಸ್ಧಳ ಪರಿಶೀಲನೆ ನಡೆಸಿ ಪರಿಹಾರವನ್ನು ಕೊಡುವ ಭರವಸೆ ನೀಡಿದ್ದಾರೆ.