ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಎರಡೂ ದೇಶಗಳು ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ಅಮೆರಿಕ ಕೂಡ ತನ್ನ ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಅಗತ್ಯವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಒಂದು ಖಾಸಗಿ ಅಮೆರಿಕನ್ ನ್ಯೂಸ್ ಚಾನೆಲ್‌ನ “60 ನಿಮಿಷಗಳ” ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ, ಅಮೆರಿಕ ಮಾತ್ರ ಅಣು ಪರೀಕ್ಷೆ ಮಾಡದಿರುವ ಏಕೈಕ ಪ್ರಮುಖ ರಾಷ್ಟ್ರವಾಗಿದೆ ಎಂದು ವಾದಿಸಿದರು.
ರಷ್ಯಾ ಇತ್ತೀಚೆಗೆ ‘ಪೋಸಿಡಾನ್’ ಜಲಾಂತರ್ಗಾಮಿ ಡ್ರೋನ್‌ನಂತಹ ಸುಧಾರಿತ ಪರಮಾಣು ಸಾಮರ್ಥ್ಯದ ವ್ಯವಸ್ಥೆಗಳನ್ನು ಪರೀಕ್ಷಿಸಿದ ಹಿನ್ನೆಲೆಯಲ್ಲಿ, ರಷ್ಯಾ 30 ವರ್ಷಗಳಿಗೂ ಹೆಚ್ಚು ಕಾಲ ಪರಮಾಣು ಸಿಡಿತಲೆಗಳ ಸ್ಫೋಟವನ್ನು ನಿಲ್ಲಿಸುವ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ ಟ್ರಂಪ್ ಈ ಹೇಳಿಕೆ ನೀಡಿದರು.
“ಪರಮಾಣು ಸಿಡಿತಲೆಗಳನ್ನು ಹೊಂದಿರುವ ದೇಶಗಳು ಅಣು ಪರೀಕ್ಷೆಗಳನ್ನು ನಡೆಸುತ್ತಿವೆ, ಆದರೆ ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ. ಚೀನಾ ಮತ್ತು ಪಾಕಿಸ್ತಾನ ಈಗಾಗಲೇ ರಹಸ್ಯ ಸ್ಫೋಟಗಳನ್ನು ನಡೆಸುತ್ತಿವೆ,” ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಟ್ರಂಪ್ ಅವರ ಈ ಹೇಳಿಕೆಯು ಭಾರತಕ್ಕೆ ತೀವ್ರ ಆತಂಕ ತಂದಿಟ್ಟಿದೆ. ನೆರೆಯ ಚೀನಾ ಮತ್ತು ಪಾಕಿಸ್ತಾನ ಎರಡೂ ರಹಸ್ಯ ಅಣು ಪರೀಕ್ಷೆಗಳಲ್ಲಿ ತೊಡಗಿದ್ದರೆ, ಭಾರತದ ರಾಷ್ಟ್ರೀಯ ಭದ್ರತೆಗೆ ಇದು ದೊಡ್ಡ ಸವಾಲಾಗಲಿದೆ.
ಭಾರತ-ಪಾಕ್ ಯುದ್ಧ ತಪ್ಪಿಸಿದ್ದೆ ನಾನು!
ಸಂದರ್ಶನದಲ್ಲಿ, ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಹಿಂದಿನ ಬಿಕ್ಕಟ್ಟಿನ ಕುರಿತು ಮತ್ತೊಮ್ಮೆ ಮಾತನಾಡಿದರು. “ಭಾರತವು ಪಾಕಿಸ್ತಾನದೊಂದಿಗೆ ಪರಮಾಣು ಯುದ್ಧ ನಡೆಸಲು ನಿರ್ಧರಿಸಿತ್ತು. ನಾನು ಮಧ್ಯಪ್ರವೇಶಿಸದಿದ್ದರೆ ಲಕ್ಷಾಂತರ ಮಂದಿ ಸಾಯುತ್ತಿದ್ದರು. ಎರಡೂ ಕಡೆ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು,” ಎಂದರು. “ನೀವು ಯುದ್ಧ ನಿಲ್ಲಿಸದಿದ್ದರೆ ಅಮೆರಿಕ ನಿಮ್ಮೊಂದಿಗೆ ಯಾವುದೇ ವ್ಯವಹಾರ ಮಾಡುವುದಿಲ್ಲ,” ಎಂದು ತಾನು ಎಚ್ಚರಿಕೆ ನೀಡಿದ್ದರಿಂದಲೇ ಆ ಯುದ್ಧ ನಿಂತಿತು ಎಂದು ಟ್ರಂಪ್ ಪುನರುಚ್ಛರಿಸಿದರು.
ಜಾಗತಿಕವಾಗಿ ಪರಮಾಣು ಪರೀಕ್ಷೆಗಳ ಬಗ್ಗೆ ಟ್ರಂಪ್ ನೀಡಿರುವ ಈ ಸ್ಫೋಟಕ ಹೇಳಿಕೆಗಳು ಅಂತರಾಷ್ಟ್ರೀಯ ರಾಜಕೀಯ ಮತ್ತು ಭದ್ರತಾ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.

