ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಯಮತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಘಟನೆಯು ತಮಿಳುನಾಡಿನ ಕಾನೂನು ಸುವ್ಯವಸ್ಥೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಬೆಳಗ್ಗೆ ವಿಶೇಷ ಪೊಲೀಸ್ ತಂಡಗಳು ದೇವಾಲಯವೊಂದರ ಬಳಿ ಆರೋಪಿಗಳಾದ ತವಸಿ, ಕರುಪ್ಪಸ್ವಾಮಿ ಮತ್ತು ಕಾಳೀಶ್ವರನ್ ಅವರನ್ನು ಸುತ್ತುವರೆದಾಗ, ಅವರು ಕುಡುಗೋಲುಗಳಿಂದ ಹಲ್ಲೆ ನಡೆಸಲು ಯತ್ನಿಸಿದರು. ಈ ವೇಳೆ ಹೆಡ್ಕಾನ್ಸ್ಟೇಬಲ್ ಚಂದ್ರಶೇಖರ್ ಗಾಯಗೊಂಡರು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ, ಅವರನ್ನು ವಶಕ್ಕೆ ಪಡೆದರು. ಗಾಯಗೊಂಡ ಮೂವರನ್ನೂ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ಶಿವಗಂಗೈ ಜಿಲ್ಲೆಯವರಾಗಿದ್ದು, ಕೋಯಮತ್ತೂರಿನಲ್ಲಿ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ ಈಗಾಗಲೇ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಭಾನುವಾರ ರಾತ್ರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಅಡ್ಡಗಟ್ಟಿ, ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯನ್ನು ಅಪಹರಿಸಿ ವಿಮಾನ ನಿಲ್ದಾಣದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.

