ಹೊಸದಿಗಂತ ವರದಿ ಮೈಸೂರು:
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ರಾಜಕೀಯ ಷಡ್ಯಂತ್ರಕ್ಕೆ ಸಚಿವ ಕೆ.ಎಸ್.ಈಶ್ವರಪ್ಪನವರು ಬಲಿಯಾಗುತ್ತಿದ್ದಾರೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು. ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪನವರು ಕಾಮಗಾರಿಯ ಬಿಲ್ ಮಂಜೂರಾತಿ ಗೆ ಶೇ 40ರಷ್ಟು ಕಮಿಷನ್ ಕೇಳಿದ್ದಾರೆ ಎನ್ನುವ ಆರೋಪವೇ ಸುಳ್ಳು. ಅಷ್ಟು ಕಮಿಷನ್ ನೀಡಿ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಿದ್ದರೂ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ದೂರು ನೀಡಲು ಸಂತೋಷ್ ದೆಹಲಿಗೆ ಹೋಗಿದ್ದರು ಎಂದರೆ, ಅವರ ಹಿಂದೆ ಯಾರೆಲ್ಲ ಇದ್ದಾರೆ, ಏನೆಲ್ಲಾ ಪಿತೂರಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಅಲ್ಲದೇ ಉಡುಪಿಗೆ ಮುಖ್ಯಮಂತ್ರಿಗಳು ಹೋದಾಗ ಅಲ್ಲಿಗೂ ಕೂಡಾ ಸಂತೋಷ್ ಹೋಗಿದ್ದಾರೆ. ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಅವರ ಜೊತೆಯಲ್ಲಿ ಯಾರೆಲ್ಲ ಇದ್ದರು ಎಂಬುದರ ಬಗ್ಗೆ ತನಿಖೆಯಾದರೆ ಸತ್ಯಾ ಸತ್ಯತೆಗಳು ಹೊರಬರಲಿದೆ ಎಂದು ಹೇಳಿದರು.