ಕೊಡಗು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ವ್ಯವಸ್ಥಿತ ಸಿದ್ಧತೆ

ಹೊಸದಿಗಂತ ವರದಿ, ಮಡಿಕೇರಿ
ಏಪ್ರಿಲ್ 22 ರಿಂದ ಮೇ, 18 ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2,919 ಬಾಲಕರು ಮತ್ತು 3,131 ಬಾಲಕಿಯರು ಸೇರಿದಂತೆ ಒಟ್ಟು 6,050 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕಲಾ ವಿಭಾಗದಲ್ಲಿ 1,570, ವಾಣಿಜ್ಯ ವಿಭಾಗದಲ್ಲಿ 3,192, ವಿಜ್ಞಾನ ವಿಭಾಗದಲ್ಲಿ 1,288 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ 6,050 ವಿದ್ಯಾರ್ಥಿಗಳಲ್ಲಿ, 5423 ವಿದ್ಯಾರ್ಥಿಗಳು ಹೊಸದಾಗಿ(ಪ್ರೆಸರ್ಸ್), 368 ಮಂದಿ ಪುನರಾವರ್ತಿತ(ರಿಪಿಟರ್ಸ್) ಹಾಗೂ ಖಾಸಗಿಯಾಗಿ 259 ವಿದ್ಯಾರ್ಥಿಗಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ 5, ಕುಶಾಲನಗರ ತಾಲೂಕಿನ 4, ಸೋಮವಾರಪೇಟೆ ತಾಲೂಕಿನ 3, ವೀರಾಜಪೇಟೆ ತಾಲೂಕಿನ 2, ಹಾಗೂ ಪೊನ್ನಂಪೇಟೆ ತಾಲೂಕಿನ 3 ಸೇರಿದಂತೆ ಒಟ್ಟು 17 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ‌ ಎಂದು ಪುಟ್ಟರಾಜು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಪರೀಕ್ಷೆಯನ್ನು ಸುಗಮ ಮತ್ತು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ 7 ಕಡೆಗಳಲ್ಲಿ ಮಾರ್ಗಾಧಿಕಾರಿಗಳ ತಂಡ ನಿಯೋಜಿಸಲಾಗಿದೆ.
ಮಡಿಕೇರಿ ಹಾಗೂ ಕುಶಾಲನಗರ ತಾಲೂಕಿನಲ್ಲಿ ತಲಾ ಸೋಮವಾರಪೇಟೆ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ತಲಾ ಒಂದು ಮಾರ್ಗಾಧಿಕಾರಿಗಳ ತಂಡ ನಿಯೋಜಿಸಲಾಗಿದೆ. ಮಾರ್ಗಾಧಿಕಾರಿಗಳ ತಂಡದಲ್ಲಿ ಕಂದಾಯ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!