ಕುಷ್ಠರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ; ವಿವೇಕಾನಂದ ಆರೋಗ್ಯ ಕೇಂದ್ರದಿಂದ ಮಾನವೀಯ ಕಾರ್ಯ

ಹೊಸದಿಗಂತ ವರದಿ, ತುಮಕೂರು
ಪಾವಗಡದಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರವು ಕುಷ್ಠರೋಗದಿಂದ ಅಂಗವಿಕಲತೆಯನ್ನು ಹೊಂದಿದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಮ್ಮಿಕೊಂಡಿದೆ ಎಂದು ಆಶ್ರಮದ ಅದ್ಯಕ್ಷ ರಾದಸ್ವಾಮಿ ಜಪಾನಂದರು ತಿಳಿಸಿದರು.
ಏಳು ಜನ ಕುಷ್ಠರೋಗಿಗಳಿಗೆ ಸಂಪೂರ್ಣ ಉಚಿತವಾದ ಅಂಗ ಪುನರ್ ಜೋಡಣಾ ಶಸ್ತ್ರ ಚಿಕಿತ್ಸೆ ಇಂದು ಆರಂಭವಾಯಿತು. ಡಾ.ಪ್ರಮೋದ್, ಹೆಸರಾಂತ ಕೀಲು ಮತ್ತು ಮೂಳೆ ವೈದ್ಯರು, ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಮತ್ತು ಡಾ.ಚಂದ್ರಕಲಾ ಜಿ.ಆರ್., ಮುಖ್ಯ ವೈದ್ಯಾಧಿಕಾರಿಗಳು, ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಇವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆಗಳು ಆರಂಭವಾಗಿದೆ.
ಈ ಯೋಜನೆಯನ್ನು ಡೇಮಿಯನ್ ಫೌಂಡೇಷನ್ ರವರ ಸಹಕಾರದೊಂದಿಗೆ ಕಳೆದ 22 ವರ್ಷಗಳಿಂದ ನಡೆಸಲಾಗುತ್ತಿದೆ. ಈವರೆವಿಗೆ ಸರಿಸುಮಾರು 575 ಮಂದಿಗೆ ಅಂಗ ಪುನರ್‌ ಜೋಡಣಾ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ನಂತರ ಸರಿಸುಮಾರು 2 ತಿಂಗಳು ಈ ರೋಗಿಗಳು ಆಸ್ಪತ್ರೆಯಲ್ಲಿಯೇ ಉಳಿದಿದ್ದು ಪ್ರತಿನಿತ್ಯ ಔಷಧೋಪಚಾರಗಳು ಹಾಗೂ ಫಿಜಿಯೋಥೆರಪಿಯನ್ನು ನೀಡಲಾಗುತ್ತದೆ.
ಇಡೀ ಕರ್ನಾಟಕದಲ್ಲಿಯೇ ಈ ತೆರನಾದ ಕುಷ್ಠರೋಗಿಗಳ ಅಂಗ ಪುನರ್‍ಜೋಡಣೆಯ ಶಸ್ತ್ರಚಿಕಿತ್ಸೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿಯೇ ನಡೆಯುತ್ತಿರುವುದು ಅತ್ಯಂತ ಮಹತ್ತರವಾದ ವಿಷಯವೇ ಸರಿ. ಪ್ರತಿಯೊಂದು ಶಸ್ತ್ರಚಿಕಿತ್ಸೆಯೂ ಸರಿಸುಮಾರು ರೂ.50,000/- ಕ್ಕೂ ಮೀರಿರುತ್ತದೆ. ಈ ಎಲ್ಲ ಚಿಕಿತ್ಸಾ ವೆಚ್ಚ, ಊಟೋಪಚಾರ ಹಾಗೂ ರೋಗಿಗಳು ಪ್ರಯಾಣ ಭತ್ಯೆ ಇತ್ಯಾದಿಗಳನ್ನು ನೀಡಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಇದ್ದಾಗ್ಯೂ ಇಡೀ ನಾಡಿನ, ದೇಶದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕ್ಲಿಷ್ಟಕರವಾದ, ಸೂಕ್ಷ್ಮವಾದ ಹಾಗೂ ಅತ್ಯಂತ ದುಬಾರಿಯಾದ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗುತ್ತಿದೆ.
ಈ ಬಾರಿ ರೋಗಿಗಳು ಬಳ್ಳಾರಿ, ಅನಂತಪುರ, ತುಮಕೂರು, ಹಿಂದೂಪುರ ಹಾಗೂ ತಾಡಪತ್ರಿಯಿಂದ ಬಂದಿರುತ್ತಾರೆ. ಒಟ್ಟಿನಲ್ಲಿ ಸೇವೆಯ ನಿರಂತರ ಯಜ್ಞ ನೆರವೇರಿಸಲಾಗುತ್ತಿದ್ದು ಈ ತೆರನಾದ ವ್ಯವಸ್ಥೆ ರಾಜ್ಯದಲ್ಲಿಯೇ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಭಾಜನವಾಗಿದೆ ಎಂದು ಸಂಸ್ಥೆಯ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!