ಹೊಸ ದಿಗಂತ ವರದಿ, ಅಂಕೋಲಾ:
ಅಂಕೋಲೆಯ ಸೀಮೆ ದೇವರು ಎಂದೇ ಪ್ರಸಿದ್ಧಿ ಪಡೆದ ಶ್ರೀ ವೆಂಕಟರಮಣ ದೇವರ ದೊಡ್ಡ ತೇರು ಉತ್ಸವ ಶನಿವಾರ ಸಂಜೆ ಸಹಸ್ರಾರು ಭಕ್ತರ ಜೈಕಾರದ ಮಧ್ಯೆ ಸಂಭ್ರಮದಿಂದ ಜರುಗಿತು.
ಶುಕ್ರವಾರ ಪುಷ್ಪ ರಥೋತ್ಸವ ಜರುಗಿತ್ತು. ಶನಿವಾರ ಹನುಮ ಜಯಂತಿ ನಿಮಿತ್ತ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದ್ದು, ಸಂಜೆ 5 ಗಂಟೆಗೆ ಸರಿಯಾಗಿ ಬ್ರಹ್ಮ ರಥವನ್ನು ದೇವಸ್ಥಾನದಿಂದ ಮುಖ್ಯ ರಸ್ತೆಯ ತಿರುವಿನವರೆಗೆ ಎಳೆದು ತರಲಾಯಿತು.
ಕೋವಿಡ್ ತಡೆಯ ನಂತರದಲ್ಲಿ ನಡೆದ ರಥೋತ್ಸವ ಇದಾದ ಹಿನ್ನೆಲೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು.
ಭಾನುವಾರ ಮೃಗಬೇಟೆ, ಜಲಯಾನ ಮತ್ತಿತರ ಧಾರ್ಮಿಕ ಕಾರ್ಯದ ನಂತರ ರಥೋತ್ಸವ ಕಾರ್ಯ ಸಂಪನ್ನಗೊಳ್ಳಲಿದೆ.