ಹಿಂದು ಜೀವನ ಪದ್ಧತಿ ಜಗತ್ತಿನಲ್ಲೇ ಶ್ರೇಷ್ಠವಾದ ಜೀವನ ಪದ್ಧತಿ: ಸಾವಿತ್ರಿ ಸೋಮಯಾಜಿ

ಹೊಸ ದಿಗಂತ, ಮಂಗಳೂರು:

ಹಿಂದು ಜೀವನ ಪದ್ಧತಿ ಜಗತ್ತಿನಲ್ಲೇ ಶ್ರೇಷ್ಠವಾದ ಜೀವನ ಪದ್ಧತಿಯಾಗಿದೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಹಿಂದು ಜೀವನ ಪದ್ಧತಿಯಲ್ಲಿ ಉತ್ತರವಿದೆ. ಹಿಂದು ಧರ್ಮಕ್ಕೆ ಎಂದಿಗೂ ಅಳಿವಿಲ್ಲ ಎಂದು ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಮಧ್ಯಕ್ಷೇತ್ರ ಕಾರ್ಯವಾಹಿಕಾ ಸಾವಿತ್ರಿ ಸೋಮಯಾಜಿ ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ವಿಭಾಗ ವತಿಯಿಂದ ನಗರದ ಸಂಘನಿಕೇತನದಲ್ಲಿ ನಡೆದ ಐದು ದಿನಗಳ ಪ್ರಾರಂಭಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಬುಧವಾರ ಅವರು ಮಾತನಾಡಿದರು.
ಬದುಕಿನಲ್ಲಿ ಅತಿ ಸಾಮಾನ್ಯ ವ್ಯಕ್ತಿಯೂ ಅತ್ಯಂತ ಎತ್ತರಕ್ಕೆ ಏರಬಹುದು. ಅಂತಹಾ ಛಲವನ್ನು ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಆಶೀರ್ವಾದ ಬಲದಿಂದ ಜಗದ್ವಿಖ್ಯಾತಿ ಗಳಿಸಿದರು. ವಿವೇಕಾನಂದರ ಜೀವನವನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.
ರಾಷ್ಟ್ರ ಸೇವಿಕಾ ಸಮಿತಿ ವ್ಯಕ್ತಿತ್ವ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಮಿತಿ ಕೈಜೋಡಿಸುತ್ತಿದೆ. ಪ್ರಾರಂಭಿಕ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದವರು ತಮ್ಮ ಊರಿಗೆ ತೆರಳಿ ನಮ್ಮ ಧರ್ಮಕ್ಕೆ ಶಕ್ತಿ ತುಂಬುವ ಕಾರ್ಯ ನಡೆಸಬೇಕು ಎಂದರು.
ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್ ಶಿಬಿರದ ವರದಿ ಮಂಡಿಸಿದರು. ಉಡುಪಿ ಜಿಲ್ಲಾ ಕಾರ್ಯವಾಹಿಕಾ ಪ್ರೇಮಾ ಪಡಿಯಾರ್ ಸ್ವಾಗತಿಸಿದರು. ವಿಭಾಗ ಸಹಕಾರ್ಯವಾಹಿಕಾ ಕಲ್ಪನಾ ಭಟ್ ವಂದಿಸಿದರು. ವಿಟ್ಲ ತಾಲೂಕು ಕಾರ್ಯವಾಹಿಕಾ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಭಾಗದ ಐದು ಜಿಲ್ಲೆಗಳಿಂದ 242 ಮಂದಿ ಶಿಬಿರಾರ್ಥಿಗಳು, 11 ಮಂದಿ ಶಿಕ್ಷಕಿಯರು ಭಾಗವಹಿಸಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪಥಸಂಚಲನ ನಡೆಸಿದರು. ನಗರದ ಸಂಘನಿಕೇತನದಿಂದ ಹೊರಟ ಪಥಸಂಚನಲನ ನಾರಾಯಣಗುರು ವೃತ್ತದವರೆಗೆ ಸಾಗಿ ಮರಳಿ ಸಂಘನಿಕೇತನದಲ್ಲಿ ಸಮಾಪನಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!