ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ. ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ ಮನೆ ಕಳೆದುಕೊಂಡವರಿಗೆ ಆಶ್ರಯ ನೀಡುವಂತೆ ಸೂಚಿಸಿದ್ದಾರೆ.
ಹೊನೊಲುಲುಗೆ ತೆರಳುತ್ತಿದ್ದ ಮೆಕ್‌ಡೊನೆಲ್ ಡೌಗ್ಲಾಸ್ ಎಂಡಿ-11ಎಫ್ ವಿಮಾನವಾದ ಯುಪಿಎಸ್ ಫ್ಲೈಟ್-2976, ನವೆಂಬರ್ 4ರ ಸಂಜೆ ಸಂಜೆ 5:15ಕ್ಕೆ (ಸ್ಥಳೀಯ ಕಾಲಮಾನ) ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವರದಿ ಮಾಡಿದೆ.

