ಧರ್ಮದಂಗಲ್‌ಗೆ ಕೊನೆಯಾಡಲು ಎಲ್ಲ ಧಾರ್ಮಿಕ ಮುಖಂಡರ ಸಭೆ ಕರೆಯಬೇಕು: ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

ಹೊಸದಿಗಂತ ವರದಿ, ಮೈಸೂರು:

ರಾಜ್ಯದಲ್ಲಿ ಉಂಟಾಗಿರುವ ಧಾರ್ಮಿಕ ದಂಗಲ್ ಗದ್ದಲಗಳನ್ನು ಬಗೆಹರಿಸಲು ಸರಕಾರ ಕೂಡಲೇ ಎಲ್ಲ ಧರ್ಮಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಬೇಕು.   ಈ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಬೇಕು. ಧರ್ಮ ದಂಗಲ್ ಬೆಳೆಯಲು ಬಿಡಬಾರದು ಎಂದು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಾಟೆ ಆತಂಕಕಾರಿ. ಇಬ್ಬರು ಪೊಲೀಸರ ಹತ್ಯೆಗೆ ಸ್ಕೆಚ್ ಹಾಕಿದ್ದರು ಈಗ ಹೇಳುತ್ತಿದ್ದೀರಿ. ಈ ವಿಚಾರ ಕಳವಳಕಾರಿಯಾಗಿದೆ. ಅವರಿಗೆ ಪ್ರೇರೆಪಣೆ ಕೊಟ್ಟವರು ಯಾರು? ಅಷ್ಟು ದೊಡ್ಡ ಗುಂಪು ಸೇರಲು ಅವಕಾಶ ಕೊಟ್ಟವರು ಯಾರು? ಪೊಲೀಸ್ ವಾಹನದ ಮೇಲೆ ನಿಂತು ಭಾಷಣ ಮಾಡಲು ಅವಕಾಶ ಕೊಟ್ಟವರು ಯಾರು? ವಾಹನ ಹತ್ತಿ ಭಾಷಣ ಮಾಡಿದ ವ್ಯಕ್ತಿಯನ್ನು ಏಕೆ ಬಂಧಿಸಿಲ್ಲ? ಆತ ಎಲ್ಲಿ ಹೋದ? ಈ ವಿಷಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಪಾತ್ರವೂ ಇದೆ. ಸರ್ವಜನಾಂಗದ ತೋಟಕ್ಕೆ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು. ಗಲಾಟೆಕೋರರ ವಿರುದ್ಧ ಬುಲ್ಡೋಜ್ ಮಾಡಿದರೆ ಯಾರಿಗೂ ಲಾಭ ಇಲ್ಲ. ಸಂಪತ್ತು ಲೂಟಿ ಮಾಡಿರುವವರ ಬೆಂಕಿ ಹಚ್ಚುವವರ ವಿರುದ್ದ ಕಾರ್ಯಾಚರಣೆ ಮಾಡಿ, ಅವರ ಆಸ್ತಿ, ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಎರಡೂ ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹತ್ತೇ ನಿಮಿಷದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿಂದಿರುವ ಸತ್ಯವನ್ನು ಜನರ ಮುಂದೆ ಇಡಬಹುದು.
ಪ್ರಕರಣಕ್ಕೆ ಸಂಬoಧಿಸಿದoತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನನ್ನು ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಆದರೆ ಕೆ.ಎಸ್. ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ÷್ಯಗಳಿದ್ದರೆ ಬಂಧಿಸಿ, ಆದರೆ, ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ. ಈಶ್ವರಪ್ಪನವರ ಪರ ಮಾತನಾಡಲು ನಾನು ಅವರ ಲಾಯರ್ ಅಲ್ಲ. ಅವರ ಬಗ್ಗೆ ನನಗೆ ಯಾವ ರೀತಿಯ ಸಾಫ್ಟ್ ಕಾರ್ನರ್ ಕೂಡ ಇಲ್ಲ. ನಾನು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ. ಸಾವಿಗೂ ಮುನ್ನ ಗುತ್ತಿಗೆದಾರ ಸಂತೋಷ್ ಅವರು ವಾಟ್ಸಾಪ್ ಸಂದೇಶ ಕಳಿಸಿದ್ದಾರೆ. ಅವರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಒಂದು ವೇಳೆ ಈಶ್ವರಪ್ಪ ತಪುö್ಪ ಮಾಡಿದ್ದರೆ, ಆತ್ಮಹತ್ಯೆಗೆ ಅವರೇ ಕಾರಣಕರ್ತರಾಗಿದ್ದರೆ ಅವರನ್ನೂ ಬಂಧಿಸಿ. ಆದರೆ, ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಎಂದು ಸ್ವತಃ ಸಂತೋಷ್ ಹೇಳಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರು ಪೈಪೋಟಿಗೆ ಬಿದ್ದು ಸಂತೋಷ್ ಅವರ ಕುಟುಂಬಕ್ಕೆ ಹಣದ ನೆರವು ನೀಡುತ್ತಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂಧಿಸುತ್ತೇನೆ. ಸಿದ್ದರಾಮಯ್ಯನವರು ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ದಾಖಲೆಗಳನ್ನು ಒದಗಿಸಿ. ಅವರನ್ನು ಬಂಧಿಸುವAತೆ ಒತ್ತಾಯ ಮಾಡಲಿ ಎಂದು ಟಾಂಗ್ ಕೊಟ್ಟರು.
ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಅವರು ಮೃತಪಟ್ಟಾಗ ನಾನು ಅವರ ಪರವಾಗಿ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿದೆ. ಅಂದಿನ ಸಿದ್ದರಾಮಯ್ಯ ಸರಕಾರದ ವೈಫಲ್ಯದಿಂದಲೇ ಹಂಡೀಭಾಗ್ ಸಾವಿಗೀಡಾದರು. ಅದಕ್ಕೆ ಬಿಜೆಪಿ ಕೂಡ ಕಾರಣ. ಆ ಪಕ್ಷದ ಶಾಸಕರು ಅಲ್ಲಿ ಏನೆಲ್ಲಾ ಮಾಡಿದ್ದರು ಎನ್ನುವುದು ಸರಕಾರಕ್ಕೆ ಗೊತ್ತಿತ್ತು. ಹಾಗೆಯೇ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನೂ ಅರೆಸ್ಟ್ ಮಾಡಿ ಎಂದು ನಾನು ಹೇಳಿದೆನಾ? ಎಲ್ಲದರಲ್ಲೂ ವಿನಾಕಾರಣ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಪರಾಧಿ ಎಂದಾರೆ ಏನು ಮಾಡುವುದು? ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ ಎಂದರು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!