ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಇಲಿನಾಯ್ಸ್‌ನಲ್ಲಿ ಎರಡು ಕಾರುಗಳ ನಡುವಿನ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸೇರಿದಂತೆ ಸ್ಥಳೀಯ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಮೃತರು ಆಂಧ್ರಪ್ರದೇಶ ರಾಜ್ಯದ ವಿದ್ಯಾರ್ಥಿಗಳು ಎನ್ನಲಾಗಿದೆ.
ಮುಂಜಾನೆ 5 ಗಂಟೆ ಸುಮಾರಿಗೆ, ವೇರ್ ಟೌನ್‌ನಿಂದ ಈಸ್ಟ್ ಕೇವ್‌ಗೆ ವೇಗವಾಗಿ ಬಂದ ಫಿಯೆಟ್ ಕಾರು ಹಳಿತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಗೆ ಅಪ್ಪಳಿಸಿದೆ. ಅಷ್ಟರಲ್ಲಿ ಎದುರಿಗೆ ಬರುತ್ತಿದ್ದ ಟೊಯೊಟಾ ಕಾರು ಡಿಕ್ಕಿ ಹೊಡೆದಿದೆ. ಫಿಯೆಟ್ ಕಾರಿನ ಸ್ಥಳೀಯ ಮಹಿಳಾ ಚಾಲಕಿ ಮೇರಿ ಎ.ಮಯೂನರ್ (32) ಸೇರಿದಂತೆ ವಂಶಿಕೃಷ್ಣ ಪೆಚೆಟ್ಟಿ (23), ಪವನ್ ಸ್ವರ್ಣ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟೊಯೊಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಪ್ಪಲಪಾಟಿ ಯಶವಂತ್, ಕಾಕುಮಾನ್ ಕಾರ್ತಿಕ್ ಮತ್ತು ಡೋರ್ನಾ ಕಲ್ಯಾಣ್ ಎಂಬುವರು ತೀವ್ರ ಗಾಯಗೊಂಡಿದ್ದಾರೆ. ಕಾರ್ತಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರು ತೆಲುಗು ವಿದ್ಯಾರ್ಥಿಗಳು ಕ್ಯಾಬಂಡೆಲ್ ಟೌನ್‌ನಲ್ಲಿರುವ ಸದರ್ನ್ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಮಾಡುತ್ತಿರುವುದಾಗಿ ಇಲಿನಾಯ್ಸ್ ರಾಜ್ಯ ಪೊಲೀಸ್ ಇಲಾಖೆ ಪತ್ತೆ ಮಾಡಿದೆ.
ಇವರಲ್ಲಿ ಕಲ್ಯಾಣ್ ಸಿವಿಲ್ ಇಂಜಿನಿಯರಿಂಗ್, ಉಳಿದವರು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.