ಅಡುಗೆ ಮಾಡುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಹ ಕೆಲವೊಮ್ಮೆ ಆಹಾರ ತಳಹಿಡಿಯುವುದು ಅಥವಾ ಸುಡುವುದು ಸಾಮಾನ್ಯ. ಆದರೆ ಅದರಿಂದ ಆಹಾರ ವ್ಯರ್ಥವಾಗಬೇಕೆಂದಿಲ್ಲ! ಸುಟ್ಟ ವಾಸನೆ ಮತ್ತು ಕಹಿ ರುಚಿಯನ್ನು ತಗ್ಗಿಸುವ ಕೆಲ ಸರಳ ಮನೆಮದ್ದುಗಳಿವೆ. ಈ ವಿಧಾನಗಳಿಂದ ನಿಮ್ಮ ಆಹಾರ ಮತ್ತೆ ರುಚಿಯಾಗುತ್ತದೆ ಹಾಗೂ ಸುಟ್ಟ ಭಾಗದ ಪರಿಣಾಮವನ್ನು ಕಡಿಮೆ ಮಾಡಬಹುದು.
- ಹಾಲಿನ ಅದ್ಭುತ ಪ್ರಯೋಗ: ಆಹಾರ ತಳಹಿಡಿದ ತಕ್ಷಣ ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ನಂತರ ಸ್ವಲ್ಪ ಕೆನೆ ಮಿಶ್ರಿತ ಹಾಲು ಸೇರಿಸಿ ಸಣ್ಣ ಉರಿಯಲ್ಲಿ ನಿಧಾನವಾಗಿ ಬಿಸಿ ಮಾಡಿ. ಹಾಲಿನ ಕ್ರೀಮಿನ ಅಂಶವು ಸುಟ್ಟ ವಾಸನೆಯನ್ನು ಹೀರಿಕೊಂಡು ಆಹಾರದ ರುಚಿಯನ್ನು ಮೃದುಗೊಳಿಸುತ್ತದೆ.
- ಮೊಸರು – ರುಚಿ ಸಮತೋಲನದ ರಹಸ್ಯ: ತರಕಾರಿಯಿಂದ ಮಾಡಿದ ಆಹಾರ ತಳಹಿಡಿದರೆ ಅದು ಬಹಳ ಕಹಿಯಾಗುತ್ತದೆ. ಇದನ್ನು ಸರಿಪಡಿಸಲು ಮೊಸರು ಒಂದು ಉತ್ತಮ ಪರಿಹಾರ. ತಳಹಿಡಿದ ಆಹಾರವನ್ನು ಬೇರೆ ಪಾತ್ರೆಗೆ ಹಾಕಿ, ಸ್ವಲ್ಪ ಮೊಸರು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬಿಸಿ ಮಾಡಿ. ಮೊಸರು ರುಚಿಯನ್ನು ಸಮತೋಲನಗೊಳಿಸಿ ಕಹಿಯನ್ನು ಕಡಿಮೆ ಮಾಡುತ್ತದೆ.
- ತುಪ್ಪ – ಸುವಾಸನೆಯ ಪರಿಹಾರ: ಹಾಲು ಅಥವಾ ಮೊಸರು ಸೇರಿಸಲು ಅನುವಾಗದ ಆಹಾರಗಳಾದ ದಾಲ್ ಅಥವಾ ಪಲ್ಯಗಳಿಗೆ ತುಪ್ಪ ಉಪಯುಕ್ತ. ತಳಹತ್ತಿದ ಆಹಾರವನ್ನು ಬೇರೆ ಪಾತ್ರೆಗೆ ಹಾಕಿ ಸ್ವಲ್ಪ ತುಪ್ಪ ಸೇರಿಸಿ ಕಲಸಿದರೆ ಸುಟ್ಟ ವಾಸನೆ ಕಡಿಮೆಯಾಗುತ್ತದೆ ಮತ್ತು ಆಹಾರಕ್ಕೆ ಸುವಾಸನೆ ಹೆಚ್ಚುತ್ತದೆ.
- ನಿಂಬೆ ರಸ – ತಾಜಾ ಸ್ಪರ್ಶ: ಆಹಾರವು ಸ್ವಲ್ಪ ಮಟ್ಟಿಗೆ ಸೀದಿದ್ದರೆ ನಿಂಬೆ ರಸ ಅಥವಾ ಟೊಮೆಟೊ ರಸ ಅಥವಾ ಸ್ವಲ್ಪ ವೆನಿಗರ್ ಸೇರಿಸುವುದು ಉತ್ತಮ. ಈ ಪದಾರ್ಥಗಳ ಆಸಿಡ್ ಅಂಶವು ಸುಟ್ಟ ವಾಸನೆಯನ್ನು ಕಡಿಮೆ ಗೊಳಿಸುತ್ತದೆ, ರುಚಿಯನ್ನು ತಾಜಾಗೊಳಿಸುತ್ತದೆ.
- ಕೆನೆ – ಕೊನೆಯ ರಕ್ಷಕ: ಹಾಲಿನ ಕೆನೆ ಅಥವಾ ಡೈರಿ ಕ್ರೀಂ ಇದ್ದರೆ ಅದನ್ನು ಬಳಸಬಹುದು. ಸುಟ್ಟ ಭಾಗವನ್ನು ಬೇರ್ಪಡಿಸಿ ಮೇಲಿನ ಉತ್ತಮ ಭಾಗಕ್ಕೆ ಕೆನೆ ಸೇರಿಸಿ ಸ್ವಲ್ಪ ಬಿಸಿ ಮಾಡಿದರೆ ರುಚಿ ಮೃದುವಾಗಿ, ಆಹಾರ ವ್ಯರ್ಥವಾಗುವುದಿಲ್ಲ.

