ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ತಲೆಮಾರುಗಳಿಂದ ಪ್ರಾಚೀನ ಮನೆ ಔಷಧಿಯಾಗಿ ಬಳಸಲಾಗುತ್ತಿದೆ. ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಜೊತೆಗೆ ಹಲವಾರು ಔಷಧೀಯ ಗುಣಗಳೂ ಇವೆ. ಆಯುರ್ವೇದ ತಜ್ಞರು ಹೇಳುವಂತೆ ಬೇವಿನ ಮರದ ಪ್ರತಿಯೊಂದು ಭಾಗವೂ ಬಹಳ ಮೌಲ್ಯಯುತವಾಗಿದೆ. ತೊಗಟೆ, ಹೂ, ಎಲೆ, ಕಾಯಿಗಳು, ಎಣ್ಣೆ, ನಮ್ಮ ಆರೋಗ್ಯಕ್ಕೆ ಒಳ್ಳೆಯದು.
ಹುಣ್ಣು, ಗಾಯ, ಕಣ್ಣಿನ ಕಾಯಿಲೆಗಳು, ಹೊಟ್ಟೆ ನೋವು, ಹಸಿವಿನ ಕೊರತೆ, ಚರ್ಮ ರೋಗಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ನಿವಾರಿಸಲು ಬೇವು ಸಹಾಯ ಮಾಡುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ತೀವ್ರವಾದ ಒಸಡು ಕಾಯಿಲೆಯಿಂದ ಉಂಟಾಗುವ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಬೇವು ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಹಲ್ಲು ಮತ್ತು ವಸಡುಗಳನ್ನು ಸ್ವಚ್ಛಗೊಳಿಸಲು ಬೇವಿನ ಕಡ್ಡಿ ಬಳಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ. ಎಳೆಯ ಬೇವಿನ ಕಡ್ಡಿಯಿಂದ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡವರಿಗೆ ಬಾಯಿ ದುರ್ವಾಸನೆ, ವಸಡಿನಲ್ಲಿ ರಕ್ತಸ್ರಾವ ಸಂಪೂರ್ಣ ಕಡಿಮೆಯಾಗುತ್ತದೆ. ಚಿಗುರೆಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಬಹುದು.
ಬೇವಿನ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ. ಪ್ರತಿನಿತ್ಯ ಬೇವಿನ ಸೊಪ್ಪು ತಿನ್ನುವ ಅಭ್ಯಾಸ ಮಾಡಿಕೊಂಡಿರುವವರಿಗೆ ಕೆಮ್ಮು, ಅಜೀರ್ಣ, ಹೊಟ್ಟೆಯಲ್ಲಿ ಹುಳುಗಳಿರುವುದಿಲ್ಲ. ಆದಾಗ್ಯೂ ಬೇವನ್ನು ಕಡಿಮೆ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಅತಿಯಾದ ಬಳಕೆ ಕೆಲವು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.