ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಸಂಸದೆ ನವನೀತ್ ಹಾಗೂ ಶಾಸಕ ರವಿ ರಾಣಾ ದಂಪತಿಯನ್ನು ಬಂಧಿಸಿದ್ದಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರವು ತನ್ನ ಹಿತಾಸಕ್ತಿಗಳ ರಕ್ಷಣೆಗೆ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆ ಮೂಲಕ ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿರುವುದು ‘ಅಸಹಿಷ್ಣು’ ಸರ್ಕಾರ. ರಾಣಾ ದಂಪತಿ ತಾವು ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎಂದು ಮಾತ್ರವೇ ಹೇಳಿದ್ದರು. ಅವರೇನು ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿರಲಿಲ್ಲ. ಅಷ್ಟಕ್ಕೆ ಅವರನ್ನು ಬಂಧಿಸಲಾಯಿತು. ಹನುಮಾನ್ ಚಾಲೀಸವನ್ನು ಮತ್ತೆಲ್ಲಿ ಪಾಕಿಸ್ತಾನದಲ್ಲಿ ಹೋಗಿ ಪಠಿಸಬೇಕಾ? ಎಂದು ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ.
ಹನುಮಾನ್ ಚಾಲೀಸಾ ಪಠಿಸುವುದು ದೇಶವಿರೋಧಿ ಕೃತ್ಯವೇ ಆಗಿದ್ದಲ್ಲಿ ಮಹಾರಾಷ್ಟ್ರ ಸರ್ಕಾರ ನಮ್ಮೆಲ್ಲರ ಮೇಲೆಯೂ ದೇಶದ್ರೋಹ ಪ್ರಕರಣ ದಾಖಲಿಸಲಿ. ನಾವಂತೂ ಹನುಮಾನ್ ಚಾಲೀಸಾ ಪಠಿಸಿಯೇ ತೀರುತ್ತೇವೆ ಎಂದು ಫಡ್ನವೀಸ್ ಮಹಾ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಮೇಲೆ ಶಿವಸೇನಾ ಕಾರ್ಯಕರ್ತರಿಂದ ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ. ತಮ್ಮ ಮೇಲೆ ಹಲ್ಲೆಗೈದವರ ವಿರುದ್ದ ಸೋಮಯ್ಯ ಅವರು ಎಫ್‌ಐಆರ್ ದಾಖಲಿಸಲೂ ಒದ್ದಾಡಬೇಕಾಯಿತು. ಇಂತಹ ಸರ್ಕಾರದ ವಿರುದ್ಧ ಹೋರಾಡುವುದನ್ನು ಬಿಟ್ಟು ನಮಗೆ ಯಾವುದೇ ಪರ್ಯಾಯ ಮಾರ್ಗ ಉಳಿದಿಲ್ಲ. ನಾವು ಹಿಂದೆ ಸರಿಯುವುದಿಲ್ಲ, ಭಯವೂ ಇಲ್ಲ. ದುಷ್ಟ ಸರ್ಕಾರದ ವಿರುದ್ಧ ಹೋರಾಡುವ ಶಕ್ತಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ