ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಸಾಂಬಾ ಗಡಿ ಬೇಲಿಯ ಬಳಿ ಸುರಂಗವೊಂದು ಪತ್ತೆಯಾಗಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಭದ್ರತಾ ಪಡೆಗಳು ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿವೆ ಎಂದು ರಕ್ಷಣಾ ಮೂಲಗಳು ವರದಿ ಮಾಡಿವೆ.
ಏಪ್ರಿಲ್ 22 ರಂದು ಜಮ್ಮುವಿನ ಸುಂಜ್ವಾನ್ ಪ್ರದೇಶದಲ್ಲಿ ರಕ್ಷಣಾ ಪಡೆಗಳು ಇಬ್ಬರು ಜೈಶ್ ಉಗ್ರರನ್ನು ಹೊಡೆದು ಹಾಕಿದ್ದರು.ಅವರಿಂದ ಎರಡು ಎಕೆ-47 ರೈಫಲ್ಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು, ಉಪಗ್ರಹ ಫೋನ್ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರು ಸಾಂಬಾದ ಸೊಪೊವಾಲ್ ಪ್ರದೇಶದಿಂದ ನುಸುಳಿದ್ದಾರೆ ಎಂದು ಶಂಕೆ ವ್ಯಕ್ತವಾದ ಬೆನ್ನಲ್ಲೇ ಆ ಪ್ರದೇಶದಲ್ಲಿ ಬಿಎಸ್ಎಫ್ ಹೆಚ್ಚಿನ ಹುಡುಕಾಟ ಪ್ರಾರಂಭಿಸಿ ಸುರಂಗ ಮಾರ್ಗವನ್ನು ಪತ್ತೆ ಮಾಡಿದೆ.
ಹತರಾದ ಭಯೋತ್ಪಾದಕರು ನರೇಂದ್ರ ಮೋದಿಯವರ ಕಾಶ್ಮೀರ ಭೇಟಿಯ ವಿರುದ್ಧ ನಡೆಸಿದ “ಪಿತೂರಿ”ಯ ಭಾಗವಾಗಿದ್ದರು ಮತ್ತು ಭಾರೀ ಭದ್ರತೆಯನ್ನು ಹೊಂದಿರುವ ಯಾವುದೇ ಪ್ರದೇಶದಲ್ಲಿ ಆತ್ಮಾಹುತಿ ದಾಳಿಗೆ ಯೋಜಿಸುತ್ತಿದ್ದರು ಎನ್ನಲಾಗಿದೆ.