ಅಡುಗೆ ಮನೆಯಲ್ಲಿ ಈರುಳ್ಳಿ ಅಂದರೆ ಅದು ಆಹಾರದ ರುಚಿಯನ್ನು ದ್ವಿಗುಣಗೊಳಿಸುವ ಒಂದು ತರಕಾರಿ. ಆದರೆ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ಹರಿಯುವ ಕಣ್ಣೀರು ಅಡುಗೆ ಪ್ರಿಯರಿಗೆ ದೊಡ್ಡ ತೊಂದರೆ! ಕತ್ತರಿಸುತ್ತಿರುವಾಗ ಕಣ್ಣೀರು ಬರೋಕೆ ಕಾರಣ ಅಲೈಲ್ ಸಲ್ಫೈಡ್ (Allyl Sulphide) ಎಂಬ ರಾಸಾಯನಿಕ. ಈ ರಾಸಾಯನಿಕ ಗಾಳಿಯಲ್ಲಿ ಆವಿಯಾಗಿ ಸಲ್ಫ್ಯೂರಿಕ್ ಆಮ್ಲದಂತೆ ರೂಪುಗೊಳ್ಳುತ್ತದೆ. ಅದು ಕಣ್ಣಿನ ಮೇಲ್ಮೈಯನ್ನು ಕೆರಳಿಸಿ ಕಣ್ಣೀರು ತರಿಸುತ್ತದೆ. ಆದರೆ ಕೆಲ ಸರಳ ಟ್ರಿಕ್ಸ್ ಬಳಸಿ ಈ ಕಣ್ಣೀರಿನ ಕಷ್ಟದಿಂದ ಮುಕ್ತಿ ಪಡೆಯಬಹುದು.
- ಫ್ರಿಜ್ನಲ್ಲಿ ತಣ್ಣಗಾಗಿಸಿ: ಈರುಳ್ಳಿಯನ್ನು ಕತ್ತರಿಸುವ ಮೊದಲು ಸುಮಾರು 30 ನಿಮಿಷಗಳ ಕಾಲ ಫ್ರಿಜ್ನಲ್ಲಿ ಇಡಿ. ತಣ್ಣಗಾದ ಈರುಳ್ಳಿ ರಾಸಾಯನಿಕ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಕತ್ತರಿಸುವಾಗ ಹೊರಬರುವ ಅನಿಲ ಪ್ರಮಾಣ ಕಡಿಮೆ ಆಗುತ್ತದೆ ಮತ್ತು ಕಣ್ಣೀರೂ ಕಡಿಮೆ ಬರುತ್ತದೆ.
- ತಣ್ಣೀರಿನಲ್ಲಿ ನೆನೆಸಿಡಿ: ಈರುಳ್ಳಿಯನ್ನು ಕತ್ತರಿಸುವ ಮೊದಲು ಕೆಲವು ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿಡಿ. ಇದು ಈರುಳ್ಳಿಯೊಳಗಿನ ಅಲೈಲ್ ಸಲ್ಫೈಡ್ ಕ್ರಿಯಾಶೀಲತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಕಣ್ಣಿನ ಉರಿಯೂ, ಕಿರಿಕಿರಿಯೂ ಕಡಿಮೆ ಆಗುತ್ತದೆ.
- ಒದ್ದೆಯಾದ ಬಟ್ಟೆ ಉಪಯೋಗಿಸಿ: ಕತ್ತರಿಸುವಾಗ ಮುಖದ ಹತ್ತಿರ ಒದ್ದೆಯಾದ ಬಟ್ಟೆ ಇಡಿ. ಇದು ಗಾಳಿಯಲ್ಲಿ ಹರಡುವ ರಾಸಾಯನಿಕಗಳನ್ನು ನಿಮ್ಮ ಕಣ್ಣಿಗೆ ತಲುಪದಂತೆ ತಡೆಗಟ್ಟುತ್ತದೆ. ಹೀಗಾಗಿ ಕತ್ತರಿಸುವಾಗ ಕಣ್ಣಿನ ಕಿರಿಕಿರಿ ಕಡಿಮೆ ಆಗುತ್ತದೆ.
- ತಣ್ಣೀರಿನಿಂದ ಕಣ್ಣು ತೊಳೆಯಿರಿ: ಕತ್ತರಿಸುವಾಗ ಕಣ್ಣು ಉರಿಯಲು ಆರಂಭವಾದರೆ ತಕ್ಷಣ ತಣ್ಣೀರಿನಿಂದ ಕಣ್ಣು ತೊಳೆಯಿರಿ. ಇದು ಕಣ್ಣಿಗೆ ತಂಪು ನೀಡುತ್ತದೆ ಮತ್ತು ಆಮ್ಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
- ಉತ್ತಮ ಗುಣಮಟ್ಟದ ಚಾಕು ಬಳಸಿ: ಮಾರುಕಟ್ಟೆಯಲ್ಲಿ ಈಗ ವಿಶೇಷ ತಂತ್ರಜ್ಞಾನದಿಂದ ತಯಾರಿಸಿದ ಚಾಕುಗಳು ಲಭ್ಯವಿವೆ. ಇವು ಈರುಳ್ಳಿಯ ರಾಸಾಯನಿಕ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತವೆ. ತೀಕ್ಷ್ಣವಾದ ಬ್ಲೇಡ್ನಿಂದ ಈರುಳ್ಳಿ ಕತ್ತರಿಸುವಾಗ ಕಡಿಮೆ ಅನಿಲ ಹೊರಬರುತ್ತದೆ. ಇದರಿಂದ ಕಣ್ಣೀರು ಬರೋ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.

