ಹೊಸದಿಗಂತ ವರದಿ, ವಿಜಯಪುರ:
ಹಣ ಪಡೆದು ಮುಖ್ಯಮಂತ್ರಿ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಇರೋವರೆಗೂ ಅದು ನಡೆಯಲು ಸಾಧ್ಯವಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ವರಿಷ್ಠರ ನಿರ್ಧಾರದ ಮೇಲೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದು, ಪಕ್ಷದಲ್ಲಿ ಅರ್ಹತೆ ಮೇಲೆಯೇ ಸ್ಥಾನ ಮಾನ ನೀಡುತ್ತಾರೆ. ಒಂದು ಎರಡು ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ ಎಂದರು.
ರಾಮದುರ್ಗದಲ್ಲಿ ನೀಡಿದ ಹೇಳಿಕೆ ವ್ಯವಸ್ಥೆಯ ಭಾಗವಾಗಿ, ಪಕ್ಷ ಹೊರತುಪಡಿಸಿ ಮಾತನಾಡಿದ್ದೇನೆ. ಕೆಲ ದಲ್ಲಾಳಿಗಳು ಎಲ್ಲಾ ಪಕ್ಷದ ಮುಖಂಡರನ್ನು ಭೇಟಿ ಆಗುತ್ತಾರೆ. ಎಲ್ಲಾ ಪಕ್ಷದ ನಾಯಕರ ಜತೆ ಪೋಟೋ ತೆಗೆದುಕೊಂಡು ನಿನ್ನ ಸಿಎಂ ಮಾಡುತ್ತೇನೆ, ಸಚಿವನನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಇದಕ್ಕಾಗಿ ಹಣ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿ ಕಳುಹಿಸ್ತಾರೆ. ಈ ದಲ್ಲಾಳಿಗಳ ಬಗ್ಗೆ ಕಾಲ ಬಂದಾಗ ಬಹಿರಂಗಗೊಳಿಸುವೆ. ದಲ್ಲಾಳಿಗಳು ಎಲ್ಲಿಯವರು ? ಯಾರು ಎಂಬುದೆಲ್ಲಾ ಇರುತ್ತದೆ. ಸುಮ್ಮಸುಮ್ಮನೆ ಆರೋಪ ಮಾಡಲು ನಾನು ಹುಚ್ಚನಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ನನ್ನ ಕಂಡರೆ ಭಯ ನನ್ನ ಮೇಲೆ 200 ಕೋಟಿ ರೂ. ಮಾನಹಾನಿ ಕೇಸ್ ಹಾಕಿದ್ದಾರೆ. ಮಾನಹಾನಿ ಕೇಸ್ ಹಾಕಿದ್ದಾಗಿನಿಂದಲೂ ಡಿಕೆಶಿಗೆ ಭಯ ಹೆಚ್ಚಾಗಿದೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಅದಕ್ಕೆ ಡಿಕೆಶಿಗೆ ಭಯ. ಯತ್ನಾಳ್ ಬಂದುಬಿಟ್ಟರೆ ನಮ್ಮ ಗತಿಯೇನು ? ಎಂಬ ಭಯವಿದೆ. ಅದಾಗ್ಯೂ ಡಿಕೆಶಿ ಏನೇ ಮಾಡಿದರೂ ಅಂಜುವ ಮಗ ನಾನಲ್ಲ. ಯತ್ನಾಳ ಏನಾದರೂ ಆದ್ರೆ ಬುಲ್ಡೋಜರ್ ತರ್ತಾರೆ ಅಂತಾ ಭಯ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡುತ್ತಾರೆ ಅಂತಾ ಭಯ. ನಾನು ಮುಖ್ಯಮಂತ್ರಿ ಆದರೆ ಬುಲ್ಡೋಜರ್ ರೆಡಿ ಇಟ್ಟಿದ್ದೀನಿ. ಬುಲ್ಡೋಜರ್‌ಗೆ ಆರ್ಡರ್ ಕೊಟ್ಟಿದ್ದೀನಿ ಎಂದರು.
ನನ್ನ ಸಚಿವ ಸ್ಥಾನ ತಪ್ಪಿಸಲು ಇದು ಷಡ್ಯಂತ್ರ. ಯತ್ನಾಳ ವಿರುದ್ಧ ಶಿಸ್ತು ಸಮಿತಿಗೆ ಶಿಫಾರಸ್ಸು ವಿಚಾರ ಶಿಫಾರಸ್ಸು ಮಾಡಲಿ, ಶಿಸ್ತು ಕಮಿಟಿ ಅಂದ್ರೆ ಏನು ? ನನ್ನ ಕರಿಸ್ತಾರಲ್ಲ, ಅಲ್ಲಿ ಹೇಳುತ್ತೇನೆ ಎಂದರು.
ಈ ಹಿಂದೆನೂ ಕರಿಸಿದ್ದರೂ ರಾಜ್ಯಾಧ್ಯಕ್ಷರೆ ಕ್ಲಿಯರ್ ಆಗಿ ಹೇಳಿದ್ದಾರಲ್ಲ. ಪಾರ್ಟಿ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಅಂತಾ. ಇಷ್ಟರ ಮೇಲೆ ಏನು ಶಿಸ್ತು ಕ್ರಮ. ಸತ್ಯ 24 ಕ್ಯಾರೆಟ್ ಬಂಗಾರ, ಸತ್ಯಕ್ಕೆ ಪಿಲ್ಟರ್ ಇರೋಲ್ಲ, ಸುಳ್ಳಿಗೆ ಪಿಲ್ಟರ್ ಇರುತ್ತೆ ಎಂದರು.