ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ನನಗೆ ಕಿರುಕುಳ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲಿ, ನಾನು ಅವರಿಗೆ ಹೆಣ್ಣಿನ ಶಕ್ತಿ ತೋರಿಸುತ್ತೇನೆ ಎಂದು ಮಹಾ ಸಿಎಂ ಉದ್ಧವ್ ಠಾಕ್ರೆಗೆ ಸಂಸದೆ ನವನೀತ್ ರಾಣಾ ಸವಾಲು ಹಾಕಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ನವನೀತ್ ರಾಣಾ, ಶಿವಸೇನೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
.ನಾನು ಮುಖ್ಯಮಂತ್ರಿಗೆ ಸವಾಲು ಹಾಕುತ್ತೇನೆ. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲಿ. ನಾನು ಹೆಣ್ಣಿನ ಶಕ್ತಿ ತೋರಿಸುತ್ತೇನೆ. ರಾಜ್ಯ ಸರ್ಕಾರ ಮಹಿಳೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ನವನೀತ್ ರಾಣಾ ಹೇಳಿದ್ದಾರೆ.
ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಗಿಳಿಗೆ ಹೋಲಿಸಿದ ಅವರು, ರಾವತ್ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.
ಮುಂಬೈ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಲಂಕೆಯನ್ನು ನಾಶಪಡಿಸದೆ ಶಾಂತಿ ನೆಲೆಸುವುದಿಲ್ಲ ಎಂದು ಅಭಿಯಾನ ಪ್ರಾರಂಭಿಸುತ್ತೇನೆ ಎಂದು ನವನೀತ್ ರಾಣಾ ಹೇಳಿದ್ದಾರೆ.
ನಾನೇನು ತಪ್ಪು ಮಾಡಿದ್ದೇನೆ?, ಹನುಮಾನ್ ಚಾಲೀಸಾ ಓದಿ ಶ್ರೀರಾಮನ ನಾಮಸ್ಮರಣೆ ಮಾಡಿದ್ದಕ್ಕೆ 14 ದಿನ ಜೈಲಿನಲ್ಲಿಟ್ಟಿದೆ, ಅಪರಾಧವಾದರೆ 14 ತಿಂಗಳು ಅಲ್ಲ, 14 ವರ್ಷ ಜೈಲಿನಲ್ಲಿ ಇರಲು ಸಿದ್ಧ ಎಂದು ಸವಾಲು ಹಾಕಿದರು.