ಹೊಸದಿಗಂತ ಡಿಜಿಟಲ್ ಡೆಸ್ಕ್
ಅಮೆರಿಕಾದ ಅತಿದೊಡ್ಡ ಸರೋವರ ಲೇಕ್ ಮೀಡ್ ಬರಗಾಲಕ್ಕೆ ತುತ್ತಾಗಿ ಬತ್ತುತ್ತಿದ್ದಂತೆ ಜಲಾಶಯದ ಒಡಲಿನಲ್ಲಿದ್ದ ಅನೇಕ ನಿಗೂಢ ರಹಸ್ಯಗಳು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಜಲಾಶಯದ ಒಡಲಿನಲ್ಲಿ ಅನೇಕ ದಶಕಗಳಷ್ಟು ಹಳೆಯದಾದ ಮಾನವ ಅವಶೇಷಗಳು ಪತ್ತೆಯಾಗುತ್ತಿದ್ದು ಜನರನ್ನು ದಿಗ್ಭ್ರಮೆಗೆ ದೂಡುತ್ತಿದೆ.
ಅಮೆರಿಕಾದ ನೆವಾಡಾ-ಅರಿಜೋನಾ ರಾಜ್ಯದ ಗಡಿಯಲ್ಲಿನ ಮೀಡ್ ಜಲಾಶಯವನ್ನು 1930 ರ ದಶಕದಲ್ಲಿ ನಿರ್ಮಿಸಲಾಯಿತು. ಪ್ರಸಿದ್ಧ ಹೂವರ್ ಅಣೆಕಟ್ಟಿನ ಪ್ರಯೋಜನ ಪಡೆದು ನಿರ್ಮಿತವಾದ ಸರೋವರ ಇದು. ಈ ಬೃಹತ್ ಜಲಾಶಯ ಲಾಸ್ ಏಂಜಲೀಸ್ನ ಸುಮಾರು 20 ಮಿಲಿಯನ್ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಲ್ಬಣಗೊಳ್ಳುತ್ತಿರುವ ಬರ, ಹವಾಮಾನ ಬದಲಾವಣೆಯ ಹೊಡೆತಗಳಿಗೆ ತುತ್ತಾಗಿರುವ ಜಲಾಶಯದ ನೀರಿನ ಮಟ್ಟವು 2000 ನೇ ಇಸವಿಯಿಂದ ಕ್ಷೀಣಿಸುತ್ತಿದೆ. ಈ ನಡುವೆ ಕಳೆದೊಂದು ವರ್ಷದಿಂದ ಕಾಡುತ್ತಿರುವ ವಿನಾಶಕಾರಿ ಬರ ಈ ಬೃಹತ್ ಜಲಾಶಯವನ್ನು ಸಂಪೂರ್ಣವಾಗಿ ಖಾಲಿ ಮಾಡುತ್ತಿದೆ. ನೀರು ಬತ್ತುತ್ತಿದ್ದಂತೆ ಜಲಾಶಯದ ಒಡಲಿನಲ್ಲಿ ಅಡಗಿದ್ದ ಭಯಾನಕ ರಹಸ್ಯಗಳು ಒಂದೊಂದಾಗಿ ಹೊರಬೀಳುತ್ತಿದೆ. ಏಪ್ರಿಲ್ 25 ರಂದು ಹೂವರ್ ಅಣೆಕಟ್ಟಿನ ಹಿಂದೆ ಕೊಲೊರಾಡೋ ನದಿ ಜಲಾಶಯಕ್ಕೆ ಸೇರುವ ಭಾಗದಲ್ಲಿ ಸಂಚರಿಸುತ್ತಿದ್ದ ಬೋಟರ್ ಗಳಿಗೆ ದಶಕಗಳಷ್ಟು ಹಳೆಯದಾದ ಗುರುತು ಪತ್ತೆಯಾಗದ ಶವದ ಅಸ್ತಿಪಂಜರವೊಂದು ಕಾಣಿಸಿತ್ತು. ಈ ವಿಚಾರ ಅಮೆರಿಕದಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು.
ಅದಾಗಿ ಒಂದು ವಾರದ ನಂತರ, ವೇಗವಾಗಿ ಕುಗ್ಗುತ್ತಿರುವ ಜಲಾಶಯದಲ್ಲಿ ಮತ್ತೊಂದು ಮಾನವ ಅವಶೇಷ ಪತ್ತೆಯಾಗಿದೆ. ಹೆಂಡರ್ಸನ್ ನಗರದ ಇಬ್ಬರು ಸಹೋದರಿಯರು ಮೇ 7, 2022 ರಂದು ಕಾಲ್ವಿಲ್ಲೆ ಕೊಲ್ಲಿಯಲ್ಲಿ ಪ್ಯಾಡಲ್ ಬೋರ್ಡಿಂಗ್ ಮಾಡುತ್ತಿದ್ದಾಗ ಈ ಅವಶೇಷಗಳು ಕಂಡುಬಂದಿವೆ. ನೀರಿನಲ್ಲಿ ಪಕ್ಕಗಿನ ವಸ್ತುವೊಂದು ನೀರಿನಲ್ಲಿ ಅರ್ಧ ಮುಳುಗಿರುವುದು ಅವರಿಗೆ ಕಂಡಿದೆ. ಅದನ್ನು ಅವರು ಪ್ರಾರಂಭದಲ್ಲಿ ದೊಡ್ಡ ಕೊಂಬಿನ ಕುರಿಯ ಅವಶೇಷಗಳು ಎಂದು ಭಾವಿಸಿದ್ದರು. ಹೊತ್ತಿರ ಹೋಗಿ ನೋಡಿದಾಗ ಅದೊಂದು ಬ್ಯಾರಲ್ ಎಂದು ತಿಳಿದಿದೆ. ಅದನ್ನು ಅದರೊಳಗೆ ಮಾನವ ದೇಹವನ್ನು ಹುದುಗಿಸಿಟ್ಟಿರುವುದು ಪತ್ತೆಯಾಗಿದೆ. ಸಹೋದರಿಯರು ಈ ವಿಚಾರವನ್ನು ತಕ್ಷಣವೇ ಅಧಿಕಾರಿಗಳನ್ನು ತಿಳಿಸಿದರು. ಈ ವ್ಯಕ್ತಿಯನ್ನು 1970 ರ ದಶಕದ ಮಧ್ಯಭಾಗ ಮತ್ತು 1980 ರ ದಶಕದ ಆರಂಭದ ಅವಧಿಯಲ್ಲಿ ಗುಂಡುಹಾರಿಸಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ಧರಿಸಿದ್ದ ಬಟ್ಟೆ, ಬೂಟುಗಳ ಆಧಾರ ಮೇಲೆ ಆತ ಆ ಕಾಲಘಟ್ಟದಲ್ಲಿ ಬದುಕಿದ್ದ ಎಂದು ಪೊಲೀಸರು ಅಂದಾಜಿಸಿದ್ದಾರೆ. ಸರೋವರದ ಮಟ್ಟವು ದಶಕಗಳ ಹಿಂದೆ ಉತ್ತಮ ಮಟ್ಟದಲ್ಲಿದ್ದಾಗ ಈ ದೇಹವನ್ನು ಸರೋವರಕ್ಕೆ ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ತುಂಬಾ ಕಷ್ಟಕರವಾದ ಪ್ರಕರಣವಾಗಿದೆ, ಸರೋವರದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಲಾಸ್ ವೇಗಾಸ್ ಪೋಲೀಸ್ನ ಲೆಫ್ಟಿನೆಂಟ್ ರೇ ಸ್ಪೆನ್ಸರ್ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಪುರಾವೆಗಳಿಗಾಗಿ ಬ್ಯಾರೆಲ್ನ ತುಕ್ಕು ಹಿಡಿದ ಲೋಹವನ್ನು ಅಧ್ಯಯನ ಮಾಡಲು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ಇದು ನರಹತ್ಯೆಯಾ ಅಥವಾ ಅನುಮಾನಾಸ್ಪದ ಸಾವೇ ಎಂದು ನಿರ್ಧರಿಸಿದ ಬಳಿಕ ಆ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಜಲಾಶಯದ ನೀರಿನ ಮಟ್ಟ ಇಳಿದಂತೆ ಒಂದೊಂದೇ ರಹಸ್ಯ ಹೊರಬೀಳುತ್ತಿದ್ದು, ನೀರಿನಾಳದಿಂದ ಇನ್ನೆಂತಹ ರಹಸ್ಯಗಳು ಹೊರಬೀಳುತ್ತವೆ ನೋಡಬೇಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ