ಹೊಸದಿಗಂತ ವರದಿ,ಮಂಗಳೂರು:
ಧಾರ್ಮಿಕ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಬಳಕೆ ಮಾಡಲು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂಬ ನಿಯಮ ಸರಿಯಲ್ಲ. ನಾನು ಮನವಿ ಮಾಡಲು ಹೋಗುವುದಿಲ್ಲ. ಅದಕ್ಕಾಗಿ ನಾನು ಅಧ್ಯಕ್ಷನಾಗಿರುವ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನೇ ತೆಗೆದು ಹಾಕಿದ್ದೇನೆ. ಬೇರೆ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಬೇಕಾದವರು ನಿಯಮ ಪ್ರಕಾರ ಮನವಿ ಸಲ್ಲಿಸಿ ಬಳಕೆ ಮಾಡಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್ ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ್ದು, ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಈ ನಿಯಮ ಪಾಲಿಸಿ ಸೌಹಾರ್ದ ಕಾಪಾಡಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ರ ವರೆಗೆ ನಿರ್ದಿಷ್ಟ ಡೆಸಿಬಲ್ ಮಿತಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಎಲ್ಲ ಮಸೀದಿಗಳಿಗೆ ನಾವು ಸಮಿತಿ ವತಿಯಿಂದ ಮನವಿ ಮಾಡಿದ್ದು, ಎಲ್ಲರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಿಯಮ ಪಾಲಿಸಲು ಒಪ್ಪಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಸಿ.ಮಹಮ್ಮದ್, ಬಾಷಾ ತಂಙಳ್, ಬಿ.ಎ.ಮುಮ್ತಾಜ್ ಅಲಿ ಕೃಷ್ಣಾಪುರ, ಕೆ.ಅಶ್ರಫ್ ಉಪಸ್ಥಿತರಿದ್ದರು.