ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷ ಸಾಮಾನ್ಯ ಜನತೆಯೊಂದಿಗೆ ಸಂಪರ್ಕ ಸರಿಗೊಳಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಾಯಾತ್ರೆ ಕೈಗೊಳ್ಳುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನವಸಂಕಲ್ಪ ಶಿಬಿರದಲ್ಲಿ ರಾಹುಲ್ ಗಾಂಧಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ವಿಚಾರಗಳನ್ನು ಬಿಟ್ಟುಕೊಡುತ್ತಿರುವುದರಿಂದ ಎದುರಾಳಿ ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿದೆ. ಅಲ್ಲದೆ ಸಾಮಾನ್ಯ ಜನರ ಜೊತೆಗೆ ಸಂಪರ್ಕ ಕಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಒಪ್ಪಿಕೊಂಡಿದ್ದಾರೆ.
ಹೀಗಾಗಿ ಜನ ಸಾಮಾನ್ಯರ ಜೊತೆಗೆ ನಮ್ಮ ಸಂಪರ್ಕ ಕಡಿತಗೊಂಡಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಅದನ್ನು ಪುನಃ ಮರು ಜೋಡಿಸಲು ಕಠಿಣ ಪರಿಶ್ರಮ ಪಡಬೇಕು. ಜನರಿಗೆ ಕಾಂಗ್ರೆಸ್ ಪಕ್ಷ ದೇಶವನ್ನು ಮುನ್ನಡೆಸಬಲ್ಲದು ಎನ್ನುವುದು ಗೊತ್ತಿದೆ ಎಂದು 400 ಕ್ಕೂ ಹೆಚ್ಚಿದ್ದ ಕಾರ್ಯಕರ್ತರ ಮುಂದೆ ರಾಹುಲ್ ತಿಳಿಸಿದರು.
ಕಾಂಗ್ರೆಸ್ ದೇಶದ ಅಸಾಧಾರಣ ಮತ್ತು ಪ್ರಾಥಮಿಕ ರಾಷ್ಟ್ರೀಯ ವಿರೋಧ ಪಕ್ಷವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದರು.