ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಜೊತೆಗೆ ಯುವಕರ ದೊಡ್ಡ ದಂಡೇ ಇದೆ. ಇದನ್ನು ಮನಗಂಡು ಸಿಐಡಿ ಅಧಿಕಾರಿಗಳು ಬೆಂಬಲಿಗರನ್ನೂ ವಿಚಾರಣೆ ಮಾಡಲು ಮುಂದಾಗಿದ್ದಾರೆ.
ಮೂರು ದಿನಗಳ ಹಿಂದೆ ರುದ್ರಗೌಡ ಸಹಚರ ಶಿವಪ್ಪ ಅವರನ್ನು ಕರೆತಂದು ವಿಚಾರಣೆ ಕೂಡ ಮಾಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ಅನೇಕ ಹಿಂಬಾಲಕರು ಊರು ಬಿಟ್ಟು ಪರಾರಿಯಾಗಿದ್ದಾರೆ.
ಕಳೆದ ಒಂದು ದಶಕದಿಂದ ರುದ್ರಗೌಡ ತನ್ನದೇ ಆದ ಯುವಕರ ತಂಡ ಕಟ್ಟಿಕೊಂಡು ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರದಿಂದ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದ. “ಸಾವಕಾರ ಪರಿಚಯ ಇದ್ರ ಸಾಕು; ಸರ್ಕಾರಿ ನೌಕರಿ ಗ್ಯಾರಂಟಿ” ಎನ್ನುವ ಮಾತು ಅಫಜಲಪುರದಲ್ಲಿ ರೂಢಿಯಾಗಿತ್ತು. ಹೀಗಾಗಿ ಯುವಕರ ದಂಡು ಹಿಂದೆ ಓಡಾಡುತ್ತಿತ್ತು.
ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆದಿತ್ತು: ಸಿಐಡಿ ಕಸ್ಟಡಿಯಿಂದ ನಾಲ್ಕೇ ದಿನಗಳಲ್ಲಿ ವಾಪಸ್ ಬರುತ್ತೇನೆ. ನನ್ನನ್ನು ಯಾರೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ರುದ್ರಗೌಡ ತನ್ನ ಪಡ್ಡೆ ಹುಡುಗರ ತಂಡಕ್ಕೆ ಹೇಳಿದ್ದ. ನ್ಯಾಯಾಲಯಕ್ಕೆ ಹಾಜರುಪಡಿಸಿದ ದಿನವೇ ಹೊರಬರುತ್ತೇನೆ ಎಂದೂ ಹೇಳಿದ್ದ. ಹೀಗಾಗಿ ಆರೋಪಿಯ ಬೆಂಬಲಿಗರೆಲ್ಲ ಸೇರಿಕೊಂಡು ಅದ್ಧೂರಿ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎನ್ನುವ ಅಂಶ ಸಹ ಸಿಐಡಿ ಅಧಿಕಾರಿಗಳಿಗೆ ಗೊತ್ತಾಗಿದೆ.
ಇದೇ ಭ್ರಮೆಯಲ್ಲಿ ರುದ್ರಗೌಡ ಬಂಧನವಾದಾಗ ಮಾಧ್ಯಮಗಳ ಮುಂದೆ ಉಡಾಫೆ ಹೇಳಿಕೆ ನೀಡುತ್ತಿದ್ದ. ಕೊಡಿ ಕೊಡಿ ಪುಕ್ಕಟೆ ಪ್ರಚಾರ ಕೊಡಿ, ಇನ್ನೆರಡು ದಿನ ಅಷ್ಟೇ ಅಲ್ಲವೇ ಎಂದು ಕ್ಯಾಮೆರಾ ಮುಂದೆ ಹೇಳಿಕೆ ಕೂಡ ನೀಡಿದ್ದ.
ಆದರೆ ಅವನ ಎಲ್ಲ ನಿರೀಕ್ಷೆಗಳನ್ನೂ ಹೂಸಿ ಮಾಡುವಲ್ಲಿ ಸಿಐಡಿ ಅಧಿಕಾರಿಗಳು ಯಶಸ್ವಿಯಾದರು. ಜೊತೆಗೆ ಸಮರ್ಥ ವಾದ ಮಂಡಿಸಿದ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ಆರೋಪಿಯನ್ನು ಕಂಬಿಗಳ ಹಿಂದೆ ಕೂರಿಸುವಲ್ಲಿ ಯಶಸ್ವಿಯಾದರು.